ಕಲಬುರಗಿ : ಐತಿಹಾಸಿಕ ಸ್ಮಾರಕದ ಸುತ್ತಲೂ ಸುಮಾರು 300 ಮೀಟರ್ ನಿರ್ಬಂಧಿತ ಪ್ರದೇಶವಾಗಿರುತ್ತದೆ ಎಂದು ನಿಯಮವಿದೆ. ಆದರೆ, ಇದ್ಯಾವುದಕ್ಕೂ ಕೇರ್ ಮಾಡದ ಮಣ್ಣುಗಳ್ಳರು ಐತಿಹಾಸಿಕ ಗುಂಬಜ್ ಪಕ್ಕದಲ್ಲೇ ಜೆಸಿಬಿಯಿಂದ 10-15 ಅಡಿ ಆಳದವರೆಗೆ ಭೂಮಿ ಬಗೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಮರಳು, ಕಲ್ಲು ಸಂಪತ್ತು ಲೂಟಿ ಮಾಡುತ್ತಿದ್ದ ದಂಧೆಕೋರರ ಕಣ್ಣು ಇದೀಗ ಮಣ್ಣಿನ ಮೇಲೂ ಬಿದ್ದಿದೆ. ಇತಿಹಾಸ ಸಾರುವ ಐತಿಹಾಸಿಕ ಸ್ಮಾರಕಗಳನ್ನು ಲೆಕ್ಕಿಸದೇ ಅಕ್ರಮವಾಗಿ ಮಣ್ಣನ್ನು ದೋಚುತ್ತಿದ್ದಾರೆ. ನಗರದ ಆರ್ ಜಿ ಕಾಲೋನಿ ಬಳಿಯ ಶೋರ್ ಗುಂಬಜ್ ಸುತ್ತಲೂ ಮಣ್ಣು ಬಗೆಯುತ್ತಿದ್ದಾರೆ.
ನಿರ್ಬಂಧಿತ ಪ್ರದೇಶವಿದ್ದರೂ ಸುಮಾರು 15 ಅಡಿ ಭೂಮಿ ಬಗೆದಿದ್ದಾರೆ. ಜೆಸಿಬಿ, ಟಿಪ್ಪರ್ ಬಳಸಿ ಹಗಲು-ರಾತ್ರಿ ಎನ್ನದೆ ಎಗ್ಗಿಲ್ಲದೆ ಖಟಕ್ ಮಣ್ಣಿಗೆ ಕನ್ನ ಹಾಕಲಾಗುತ್ತಿದ್ದು, ಮಣ್ಣು ಗಣಿಗಾರಿಕೆಯಿಂದ ಐತಿಹಾಸಿಕ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತಿದೆ. ಮನೆ ನಿರ್ಮಾಣ ಹಂತದಲ್ಲಿ ಪಾಯ ಹಾಕಲು ಈ ಖಟಕ್ ಮಣ್ಣಿನ ಅಗತ್ಯವಿರುತ್ತದೆ. ಹೀಗಾಗಿ ಈ ಮಣ್ಣಿಗೆ ಡಿಮ್ಯಾಂಡ್ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ಖಟಕ್ ಮಣ್ಣಿಗೆ ಕನ್ನ ಹಾಕುತ್ತಿದ್ದಾರೆ.