ಸೇಡಂ(ಕಲಬುರಗಿ): ಕೊರೊನಾ ಆತಂಕದ ಹಿನ್ನೆಲೆ, ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದ್ದರೂ ತಾಲೂಕಿನೆಲ್ಲೆಡೆ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.
ಶುಕ್ರವಾರ ಮಧ್ಯರಾತ್ರಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಟಿಪ್ಪರ್ ವಿರುದ್ಧ ಸೇಡಂ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾಯ ನಿರೀಕ್ಷಕ ಮನುವ್ಯಾಸ್ ಪ್ರಕರಣ ದಾಖಲಿಸಿದ್ದಾರೆ. ಆದರೆ, ಪ್ರಕರಣದಲ್ಲಿ ಟಿಪ್ಪರ್ ಮಾಲೀಕ ಹಾಗೂ ಚಾಲಕರ ಹೆಸರು ಸೇರ್ಪಡೆ ಮಾಡಿಲ್ಲ.
ಮರಳಿನ ಸಾಗಣೆ ಸಂಶಯದ ಮೇರೆಗೆ ವಶಕ್ಕೆ ಪಡೆದ ಟಿಪ್ಪರ್ ಅನ್ನು, 24 ಗಂಟೆಗಳ ಕಾಲ ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ ಪ್ರಕರಣ ದಾಖಲಿಸದೇ ನಿಲ್ಲಿಸಲಾಗಿತ್ತು. ಯಾವುದೇ ಅಧಿಕಾರಿ ಅಕ್ರಮ ಪ್ರಕರಣದಡಿ ವಾಹನ ವಶಕ್ಕೆ ಪಡೆದ ಮೇಲೆ ಪೊಲೀಸರ ಸುಪರ್ದಿಗೆ ಒಪ್ಪಿಸಬೇಕು. ಟಿಪ್ಪರ್ ಮಾಲೀಕ ರಾಜಧನ ಪಾವತಿ ಮಾಡಿದ್ದಾರೆಯೇ ಎಂಬ ಬಗ್ಗೆಯೂ ಸಹಾಯಕ ಆಯುಕ್ತ ರಮೇಶ ಕೋಲಾರ ಅವರಿಗೆ ಮಾಹಿತಿ ಇರಲಿಲ್ಲ.
ಕೊನೆಗೂ ಶುಕ್ರವಾರ ಮಧ್ಯರಾತ್ರಿ ಟಿಪ್ಪರ್ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಸೇಡಂ ಪೊಲೀಸ್ ಠಾಣೆಯಲ್ಲಿ ಕಂದಾಯ ನಿರೀಕ್ಷಕ ಮನುವ್ಯಾಸ್ ಪ್ರಕರಣ ದಾಖಲಿಸಿದ್ದಾರೆ. ಆದರೆ, ಟಿಪ್ಪರ್ ಮಾಲೀಕರ ಹಾಗೂ ಡ್ರೈವರ್ ಹೆಸರು ಪ್ರಕರಣದಲ್ಲಿ ಇಲ್ಲ.