ಕಲಬುರಗಿ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಹೈದರಾಬಾದ್ ಕರ್ನಾಟಕ ಭಾಗವನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಆರೋಪಿಸಿದೆ.
ಕಲಬುರಗಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ, ಇಡೀ ಹೈದರಾಬಾದ್ ಕರ್ನಾಟಕಕ್ಕೆ ಕೇವಲ ಒಂದು ಸಚಿವ ಸ್ಥಾನ ನೀಡಲಾಗಿದೆ ಎಂದು ಕಿಡಿಕಾರಿದರು. ಈ ಭಾಗಕ್ಕಾದ ಅನ್ಯಾಯ ಸರಿಪಡಿಸಲು ಮತ್ತಷ್ಟು ಜನರಿಗೆ ಸಚಿವ ಸ್ಥಾನ ನೀಡಬೇಕು. ಸೆಪ್ಟೆಂಬರ್ 17ರಂದು ನಡೆಯುವ ವಿಮೋಚನಾ ದಿನಾಚರಣೆಗೆ ಮುನ್ನ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಈ ಭಾಗದ ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಕೈಗೊಳ್ಳಬೇಕು. ಇಡೀ ಸಚಿವ ಸಂಪುಟ ವಿಮೋಚನಾ ದಿನಾಚರಣೆಯಲ್ಲಿ ಭಾಗಿಯಾಗಿ ಹಬ್ಬದ ರೀತಿಯಲ್ಲಿ ವಿಮೋಚನಾ ದಿನಾಚರಣೆ ಆಚರಿಸಬೇಕೆಂದು ಪಾಟೀಲ ಆಗ್ರಹಿಸಿದ್ದಾರೆ.
ಅಲ್ಲದೇ ಕಲಬುರಗಿ ಕಮಿಷನರೇಟ್ ಆರಂಭವಾಗಿ ತಿಂಗಳುಗಳೇ ಕಳೆದರೂ ಇದುವರೆಗೂ ಕಮಿಷನರ್ ಅವರನ್ನು ನೇಮಿಸಿಲ್ಲ. ಹಾಗೂ ಹೊಸದಾಗಿ ಬಂದಿರುವ ಪೊಲೀಸ್ ಅಧಿಕಾರಿಗಳಿಗೆ ವಾಹನ ಸೌಲಭ್ಯ ನೀಡಿಲ್ಲ. ಕೂಡಲೇ ನೂತನ ಕಮಿಷನರ್ ನೇಮಿಸಿ ಅಧಿಕಾರಿಗಳಿಗೆ ವಾಹನ ಸೌಲಭ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸಿದ್ದಾರೆ.