ಸೇಡಂ(ಕಲಬುರಗಿ): ದೇಶದಲ್ಲಿ ಒಗ್ಗಟ್ಟಿದ್ದರೆ ಚೀನಾ ಹಾಗೂ ಪಾಕಿಸ್ತಾನವನ್ನು ಹೆದರಿಸಬಹುದು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಹೇಳಿದರು. ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದ ಮಂಗಲ ಮಂಟಪದಲ್ಲಿ ನಡೆದ ಬೃಹತ್ ಆರೋಗ್ಯ ಶಿಬಿರ, ನೇತ್ರದಾನ ಶಿಬಿರ ಹಾಗೂ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೆಡಿಎಸ್ ಪಕ್ಷವನ್ನು ಮುಗಿಸಿ ಬಿಡುವ ಮಾತುಗಳನ್ನಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಮುಖಂಡರಿಗೆ ಮುಂದಿನ ದಿನಗಳಲ್ಲಿ ಜನ ಉತ್ತರ ನೀಡಲಿದ್ದಾರೆ. ಜೆಡಿಎಸ್ ಉಳಿಸುವ ಶಕ್ತಿ ಜನ ಮಾಡ್ತಾರೆ. ಕೇವಲ ರಾಜಸ್ಥಾನ, ಛತ್ತೀಸಗಢ್‌ದಲ್ಲಿ ಮಾತ್ರ ಉಳಿದಿರುವ ಕಾಂಗ್ರೆಸ್ ಪಕ್ಷ ತನ್ನ ಉಳಿವಿಗಾಗಿ ಹೋರಾಡಬೇಕಿದೆ ಎಂದು ತಿರುಗೇಟು ನೀಡಿದರು.
ಸಮಾಜದಲ್ಲಿ ತುಳಿತಕ್ಕೊಳಗಾದ ಮಹಿಳೆಯರಿಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಜೆಡಿಎಸ್ ಪಕ್ಷ. ಡಾ.ಬಿ.ಆರ್. ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ನಡೆದು ಸಮಾನತೆಯನ್ನು ಸಾರಿದ್ದು ಜೆಡಿಎಸ್ ಪಕ್ಷವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಶಕ್ತಿ ಕೊಟ್ಟ ಮಹಾನ್ ನಾಯಕರಾಗಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಂಡೆಪ್ಪ ಕಾಶಂಪೂರ್ ಮಾತನಾಡಿದರು. ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮೀಜಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಅಫಜಲಪುರ ಮುಖಂಡರಾದ ಶಿವಕುಮಾರ ನಾಟಿಕಾರ, ಚಿಂಚೋಳಿಯ ಸಂಜೀವನ ಯಾಕಾಪೂರ, ಜೆಡಿಎಸ್ ತಾಲೂಕು ಅಧ್ಯಕ್ಷ ಎಕ್ಬಾಲಖಾನ್, ಹಿರಿಯ ಮುಖಂಡ ಅಶೋಕ ಗುತ್ತೇದಾರ್, ಮಹೇಶ್ವರಿ ವಾಲಿ, ಹೆಚ್ ಸಿ ನೀರಾ, ಶಾಮರಾವ್ ಸೂರನ, ರಾಹುಲ ಯಾಕಾಪೂರ, ಕಾರ್ಯಾಧ್ಯಕ್ಷ ಶಿವರಾಮರೆಡ್ಡಿ ಮುಧೋಳ, ಜಗನ್ನಾಥರೆಡ್ಡಿ ಗೋಟೂರ ವೇದಿಕೆಯಲ್ಲಿದ್ದರು.
ಕೊತ್ತಲ ಶ್ರೀಗಳಿಗೆ ಆಸನ ಬಿಟ್ಟು ಕೊಟ್ಟ ಗೌಡರು : ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ವಿಶೇಷ (ರಾಜಾ ಸೀಟ್) ಆಸನದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮೀಜಿ ವೇದಿಕೆಗೆ ಬಂದ ಕೂಡಲೇ ತಮ್ಮ ಆಸನವನ್ನು ಬಿಟ್ಟುಕೊಟ್ಟ ಹೆಚ್.ಡಿ. ದೇವೇಗೌಡ ಅವರು ಗಮನಸೆಳೆದರು. ಇದನ್ನು ಕಂಡ ನೂರಾರು ಜನ ಕಾರ್ಯಕರ್ತರು ಚಪ್ಪಾಳೆಯ ಮೂಲಕ ಹೆಚ್‌ಡಿಡಿ ಸರಳತೆ ಕೊಂಡಾಡಿದರು.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂನಲ್ಲಿ ಇಡೀ ಬೆಂಗಳೂರು ಬಂದ್ : ಪೊಲೀಸ್ ಆಯುಕ್ತ ಕಮಲ್ ಪಂತ್