ಕಲಬುರಗಿ: 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ಪಿನ್ ಆರ್.ಡಿ.ಪಾಟೀಲ್ ನೀಡಿರುವ ಆಡಿಯೋ ಬಾಂಬ್ ಕುರಿತು ತನಿಖೆ ನಡೆಸಲಾಗುವುದೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜಿಲ್ಲೆಯ ಅಫಜಲಪೂರ ತಾಲೂಕಿನ ಗಾಣಗಾಪುರದಲ್ಲಿ ವಿಠ್ಠಲ ಹೇರೂರ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಆರ್.ಡಿ.ಪಾಟೀಲ್ ತನಿಖಾಧಿಕಾರಿ ವಿರುದ್ಧ ಹಣ ಬೇಡಿಕೆ ವಿಡಿಯೋ ಹಾಗೂ ಆಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿ, ಆರೋಪಿ ಆರ್.ಡಿ.ಪಾಟೀಲ್ ಏನು ಹೇಳಿದ್ದಾನೆ ಎಂಬುದು ಅಲ್ಲಿಯ ಪೊಲೀಸ್ ತನಿಖಾಧಿಕಾರಿಗಳಿಗೆ ಗೊತ್ತಿದೆ. ತನಿಖೆ ಬಳಿಕ ಅಧಿಕಾರಿಗಳದ್ದು ತಪ್ಪಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಕೋರ್ಟ್ ಆದೇಶದ ಮೂಲಕ ತನಿಖೆ ನಡೆಯುತ್ತಿದೆ ಎಂದರು.
ವಿಠಲ್ ಹೇರೂರ್ ಅವರ ಕಂಚಿನ ಪ್ರತಿಮೆ ಅನಾವರಣಕ್ಕೆ ಬಂದಿದ್ದೇನೆ. ದೇವಲ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನ ಪಡೆಯುತ್ತಿದ್ದೇನೆ. ನಮ್ಮ ಸರ್ಕಾರದಿಂದ ದೇವಲ ಗಾಣಗಾಪುರ ಅಭಿವೃದ್ಧಿಗೆ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಕಲಬುರಗಿ ಭಾಗದ ಪ್ರಮುಖ ಬೆಳೆ ತೊಗರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರಮಾಣದಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ಹಾನಿಯಾಗಿದ್ದು, ಈ ವಿಚಾರವಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಕರ್ತವ್ಯವಾಗಿದೆ. ತೊಗರಿ ಬೆಳೆ ಪರಿಹಾರಕ್ಕೆ ಸಿದ್ಧತೆ ನಡೆದಿದೆ. ಈ ಕುರಿತಾಗಿ ಇಂದು ಸಂಜೆ ಸಭೆ ಮಾಡಲಾಗುತ್ತಿದೆ. ತೊಗರಿ ಬೆಳೆಗೆ ಪರಿಹಾರ ನೀಡಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ರೈತರು ಒತ್ತಾಯಿಸಿದ್ದು, ಪರಿಹಾರವನ್ನು ಎಷ್ಟು ಮತ್ತು ಯಾವ ಮಾನದಂಡದ ಮೇಲೆ ನೀಡಬೇಕು ಎನ್ನುವ ನಿರ್ಧಾರವನ್ನು ಕೃಷಿ, ಹಣಕಾಸು ಹಾಗೂ ಇತರೆ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಭೆಯಲ್ಲಿ ಮಾಡಲಾಗುತ್ತದೆ. ಸೂಕ್ತ ಪರಿಹಾರ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಯಲಹಂಕದಲ್ಲಿ ಫೆಬ್ರವರಿ 13 ರಿಂದ 17ರ ವರೆಗೆ ನಡೆಯುವ ಏರೋ ಇಂಡಿಯಾ ಏರ್ ಶೋ ಪೂರ್ವ ಸಿದ್ಧತೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಇಲ್ಲಿಂದನೇ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದೇನೆ. ಈ ಬಾರಿ ಅತಿದೊಡ್ಡ ಏರ್ ಶೋ ಮತ್ತು ಏರ್ ಸ್ಪೇಷ್ ಎಕ್ಸಿಬಿಷನ್ ಆಯೋಜಿಸಲಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಸ್ಪೇಸ್ ಕ್ಷೇತ್ರದ ಅನೇಕ ಕಂಪನಿಗಳು, ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. 1996 ರಿಂದಲೂ ಕರ್ನಾಟಕ ಏರ್ ಶೋಗೆ ಆತಿಥ್ಯ ವಹಿಸುತ್ತಿರುವುದು ನಾಡಿಗೆ ಗೌರವದ ವಿಷಯವಾಗಿದೆ ಎಂದರು.
ಗಾಣಗಾಪುರ ಅಭಿವೃದ್ಧಿ- 67 ಕೋಟಿ ರೂ. ಡಿ.ಪಿ.ಆರ್ ಸಿದ್ಧ: ಕಾಶಿ ವಿಶ್ಚನಾಥ ಮತ್ತು ಉಜ್ಜೈನಿಯ ಕಾಳಹಸ್ತಿ ಮಾದರಿಯಲ್ಲಿ ಕಲಬುರಗಿಯ ದತ್ತಾತ್ರೇಯ ಸುಕ್ಷೇತ್ರವಾದ ಗಾಣಗಾಪುರ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೇ 5 ಕೋಟಿ ರೂ. ನೀಡಲಾಗಿದೆ. ಜಿಲ್ಲಾಡಳಿತ ದತ್ತನ ಕ್ಷೇತ್ರದ ಅಭಿವೃದ್ಧಿಗೆ 67 ಕೋಟಿ ರೂ. ವೆಚ್ಚದ ಡಿ.ಪಿ.ಆರ್. ಸಿದ್ಧಪಡಿಸಿದ್ದು, ಬರುವ ಆಯವ್ಯಯದಲ್ಲಿ ಇದನ್ನು ಘೋಷಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಎಂ.ಎಲ್.ಸಿ ಗಳಾದ ಶಶೀಲ ಜಿ. ನಮೋಶಿ, ಬಿ.ಜಿ. ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು.
ಇದನ್ನೂ ಓದಿ: ವಿಶೇಷ ಅಭಿವೃದ್ಧಿ ಯೋಜನೆಗೆ ಕನಿಷ್ಠ ಕಾಳಜಿ: ಹೇಗಿದೆ ಬೊಮ್ಮಾಯಿ ಸರ್ಕಾರದ ಬಜೆಟ್ ಪ್ರಗತಿ?