ಕಲಬುರಗಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಜನಿ ಮತ್ತು ವೀರ್ ಜಲಾಶಯಗಳಿಂದ ಭೀಮಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮ ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಎದುರಾಗಿದೆ.
ಸೊನ್ನ ಬ್ಯಾರೇಜ್ ನ ಒಳ ಹರಿವು ಹೆಚ್ಚಳವಾಗಿದ್ದು, ಬ್ಯಾರೇಜ್ದಿಂದ ಭೀಮಾ ನದಿಗೆ 1.12 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಭೀಮಾ ನದಿಗೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ, ಅಫ್ಜಲ್ಪುರ ತಾಲೂಕಿನ ಘತ್ತರಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸೇತುವೆ ಮೇಲೆ ನೀರು ಹರಿಯುತ್ತಿದೆ.
ಅಷ್ಟೆ ಅಲ್ಲದೇ, ದೇವಲಗಾಣಗಾಪುರ ಬಳಿಯ ಸೇತುವೆ ಕೂಡ ಮುಳುಗುವ ಸಾಧ್ಯತೆಯಿದೆ. ಅಫ್ಜಲ್ಪುರ ತಾಲೂಕಿನ ಮಣ್ಣೂರಿನಲ್ಲಿ ಎಲ್ಲಮ್ಮ ದೇವಸ್ಥಾನ ಸೇತುವೆ ಮೇಲೆ ನೀರು ಬಂದಿರುವ ಪರಿಣಾಮ ಒಳಪ್ರವೇಶ ನಿರ್ಭಂದಿಸಲಾಗಿದೆ. ನದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇರುವುದರಿಂದ ನದಿ ಬಳಿ ತೆರಳದಂತೆ ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.