ಕಲಬುರಗಿ : ಹಿಂದುಳಿದ ಪ್ರದೇಶವನ್ನು ಸಮಗ್ರ ಅಭಿವೃದ್ಧಿ ಮಾಡಲೆಂದು ಹೈದರಾಬಾದ್ ಕರ್ನಾಟಕ ಹೆಸರನ್ನು ಬದಲಿಸಿ ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದೆ. ಇದೀಗ ಈಶಾನ್ಯ ಕರ್ನಾಟಕ ಸಾರಿಗೆ ನಿಗಮದ (NEKRTC) ಹೆಸರನ್ನು ಬದಲಿಸಿ ಇಂದಿನಿಂದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಎಂದು ಮರು ನಾಮಕರಣ ಮಾಡಲಾಗಿದೆ. ಹೆಸರು ಬದಲಿಸಿದ ಬೆನ್ನಲ್ಲೇ ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆ ಹೊಸ ಹೆಜ್ಜೆ ಇಟ್ಟಿದೆ.
ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಕೆಕೆಆರ್‌ಟಿಸಿ ಮಹತ್ವದ ಹೊಸ ಹೆಜ್ಜೆ ಇಟ್ಟಿದೆ. ಬಸ್‌ನಲ್ಲಿ ಪ್ರಮಾಣಿಸಿ ನಿಲ್ದಾಣದಲ್ಲಿ ಬಂದಿಳಿಯುವ ಮಹಿಳಾ ಪ್ರಯಾಣಿಕರು ಶೌಚಾಲಯ, ವಾಷ್ ರೂಂ, ಸ್ನಾನಕ್ಕಾಗಿ ಸಮಸ್ಯೆ ಅನುಭವಿಸುತ್ತಿದ್ದರು. ಇದನ್ನ ಗಮನದಲ್ಲಿಟ್ಟುಕೊಂಡು ಕೆಕೆಆರ್‌ಟಿಸಿ, ನಿರುಪಯುಕ್ತ ಬಸ್ನ ಬಳಸಿಕೊಂಡು ಹೈಟೆಕ್ ಮಹಿಳಾ ಶೌಚಾಲಯ ನಿರ್ಮಿಸಿದೆ.
ಸೆಲ್ಕೋ ಸೋಲಾರ್ ಸಿಸ್ಟಮ್ ಸಹಯೋಗದೊಂದಿಗೆ ಸುಮಾರು ₹4.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಮೊಬೈಲ್ ಬಸ್ ಶೌಚಾಲಯದಲ್ಲಿ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೈಟೆಕ್ ಮೊಬೈಲ್ ಬಸ್ ಶೌಚಾಲಯದಲ್ಲಿ ಒಂದು ವೆಸ್ಟರ್ನ್, ಒಂದು ಇಂಡಿಯನ್ ಟೈಪ್ ಟಾಯ್ಲೆಟ್, ಒಂದು ಸ್ನಾನಕ್ಕಾಗಿ ಒಂದು ಬಾಥ್ ರೂಂ ಕೂಡ ಇದೆ. ಅಲ್ಲದೆ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಫೀಡಿಂಗ್ ರೂಮ್ ಕೂಡ ಇದೆ.
ಹ್ಯಾಂಡ ವಾಶ್ ಮಾಡಲು ಹೈಟೆಕ್ ವಾಶ್ ಬೆಸೀನ್ ಅಳವಡಿಸಲಾಗಿದೆ. ಇದರ ಜೊತೆಗೆ ಚೇರ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸೋಲಾರ್ ಸಿಸ್ಟಮ್ ಮೂಲಕ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಹೈಟೆಕ್ ಮೊಬೈಲ್ ಮಹಿಳಾ ಶೌಚಾಲಯ ಬಳಸಲು 5 ರೂ. ದರ ನಿಗದಿ ಮಾಡಲಾಗಿದೆ. ಕಲಬುರಗಿಗೆ ಭೇಟಿ ನೀಡಿದ್ದ ಸಾರಿಗೆ ಸಚಿವರು ಈ ಹೈಟೆಕ್ ಬಸ್ ಶೌಚಾಲಯಕ್ಕೆ ಚಾಲನೆ ನೀಡಿದರು. ಸದ್ಯ ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿಯೇ ಈ ಮೊಬೈಲ್ ಬಸ್ ಶೌಚಾಲಯ ಸೇವೆಗೆ ಲಭ್ಯವಿದೆ.
ನಿಜಾಮನ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ ಭಾಗ ಹಿಂದುಳಿದ ಭಾಗ ಎಂದು ಗುರುತಿಸಲಾಗುತಿತ್ತು. ಈ ಭಾಗದ ಅಭಿವೃದ್ದಿಗಾಗಿ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗಿತ್ತು. ಬಳಿಕ ಇದೀಗ ಈಶಾನ್ಯ ಸಾರಿಗೆ ಸಂಸ್ಥೆಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಿದಲ್ಲದೆ, ಇದೇ ಹಿಂದುಳಿದ ಜಿಲ್ಲೆಯಿಂದ ಹೈಟೆಕ್ ಸಂಚಾರಿ ಬಸ್ ಟಾಯ್ಲೆಟ್ ಪರಿಚಯಿಸುವ ಮೂಲಕ ಈ ಭಾಗದ ಜನರಲ್ಲಿ ಒಂದಿಷ್ಟು ಅಭಿವೃದ್ದಿಯ ಆಸೆ ಚಿಗರಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ.
ಸದ್ಯ ಕಲಬುರಗಿಯಲ್ಲಿ ಹೊಸ ಪ್ರಯತ್ನ ಮಾಡಿರುವ ಸಾರಿಗೆ ಸಂಸ್ಥೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಹಿಳಾ ಪ್ರಯಾಣಿಕರಿಗಾಗಿ ಈ ರೀತಿಯ ಹೈಟೆಕ್ ಮೊಬೈಲ್ ಶೌಚಾಲಯ ಮಾಡೋದಾಗಿ ಸಚಿವ ಸವದಿಯವರು ತಿಳಿಸಿದ್ದಾರೆ.
ಇದನ್ನೂ ಓದಿ : ರಾಜ್ಯಸಭೆ TO ಮೋದಿ ಸಂಪುಟ: ಉದ್ಯಮಿ ರಾಜೀವ್ ಚಂದ್ರಶೇಖರ್ ಕನಸೀಗ ನನಸು