ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ವರುಣನ ಅರ್ಭಟ ಜೋರಾಗಿದೆ. ಜಿಲ್ಲೆಯ ಬೆಣ್ಣೆತೋರಾ ಜಲಾಶಯ ಭರ್ತಿಯಾಗಿರುವುದರಿಂದ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ದೇಗಲಮಡಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನಾಲೆಯ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಅಲ್ಲದೆ, ಪಟಪಳ್ಳಿ, ಹಸರಗುಂಡಗಿ, ಗಡಿಕೇಶ್ವರ, ಯಂಪಳ್ಳಿ, ಕಂಚಿನಾಳ, ಶಾದಿಪೂರ್ ಗ್ರಾಮಗಳಲ್ಲೂ ಕೂಡ ಮಳೆ ನೀರಿನಿಂದ ಹೋಟೆಲ್ ಹಾಗೂ ನಾಲ್ಕೈದು ಮನೆಗಳು ಜಲಾವೃತವಾಗಿವೆ. ಕಾಳಗಿ ತಾಲೂಕಿನ ಹಳೆ ಹೆಬ್ಬಾಳ ಗ್ರಾಮಸ್ಥರಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಇಲ್ಲಿನ ಸಣ್ಣ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ. ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಉದ್ದು, ಹೆಸರಿನ ಬೆಳೆ ಹಾಳಾಗುವ ಆತಂಕ ರೈತರಲ್ಲಿ ಮೂಡಿದೆ.
ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಕಾಳಗಿ ತಾಲೂಕಿನ ನೀಲಕಂಠೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.