ಕಲಬುರಗಿ: ಗಂಡನ ಕಿರುಕುಳ ತಾಳಲಾರದೆ 8 ತಿಂಗಳ ಗರ್ಭಿಣಿಯೋರ್ವಳು 12 ಕಿ.ಮೀ. ನಡೆದುಕೊಂಡು ಪೊಲೀಸ್ ಠಾಣೆಗೆ ಬಂದಿರುವ ಘಟನೆ ಕಮಲಾಪುರನಲ್ಲಿ ನಡೆದಿದೆ.
ಕಮಲಾಪುರ ತಾಲೂಕಿನ ಬಂಡನಕೇರಾ ತಾಂಡಾ ನಿವಾಸಿ ಚೀನಾಬಾಯಿ ಎಂಬ ಮಹಿಳೆ ಪತಿಯ ಹಿಂಸೆ ತಾಳಲಾರದೆ ಸುಮಾರು 12 ಕಿ.ಮೀ. ನಡೆದುಕೊಂಡೇ ಠಾಣೆಗೆ ಬಂದಿದ್ದಾಳೆ. ಈಕೆಯ ಪತಿ ಸುನೀಲ್ ಹಾಗೂ ಈತನ ಸಹೋದರ ಗೋರಕನಾಥ ಇಬ್ಬರು ಸೇರಿ ನನಗೆ ತವರು ಮನೆಯಿಂದ ಎರಡು ಲಕ್ಷ ರೂ. ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಅನ್ನೋದು ಮಹಿಳೆಯ ಆರೋಪವಾಗಿದೆ.
ಸುನೀಲ್ ಹಾಗೂ ಚೀನಾಬಾಯಿ ದಂಪತಿಗೆ ಮದುವೆಯಾಗಿ ಎರಡು ವರ್ಷ ಕಳೆದಿದೆ. ಈ ಮುಂಚೆ ಇಬ್ಬರು ಹೆಂಡತಿಯರು ಆತನನ್ನು ಬಿಟ್ಟು ಹೋಗಿದ್ದು, ಮೂರನೇ ಮದುವೆ ನನ್ನೊಂದಿಗೆ ಮಾಡಿಕೊಂಡಿದ್ದಾನೆ. ನಿತ್ಯ ಕುಡಿದು ಬಂದು, ನನ್ನ ಮೇಲೆ ದೈಹಿಕ ಹಲ್ಲೆ ಮಾಡುತ್ತಿದ್ದಾನೆ. ಇದಕ್ಕೆ ಆತನ ಸಹೋದರ ಪ್ರಚೋದನೆ ನೀಡುತ್ತಿದ್ದಾನೆ. ಈ ಮುಂಚೆ ಒಂದು ಲಕ್ಷ ರೂ. ನೀಡಿದ್ದೇವೆ. ಈಗ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದಾನೆ ಎಂದು ಮಹಿಳೆ ಹಾಗೂ ಆಕೆಯ ತಾಯಿ ಆರೋಪಿಸಿದ್ದಾರೆ. ಕಮಲಾಪುರ ಪೊಲೀಸರ ಸಲಹೆಯಂತೆ ಇದೀಗ ಕಲಬುರಗಿಯ ಮಹಿಳಾ ಠಾಣೆಗೆ ಬಂದು ದೂರು ನೀಡಿದ್ದಾಗಿ ಮಹಿಳೆ ಚೀನಾಬಾಯಿ ತಿಳಿಸಿದ್ದಾಳೆ.