ಕಲಬುರಗಿ : ಜಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಪರದಾಟ ಮುಂದುವರೆದಿದೆ. ಕುಡಿಯುವ ನೀರಿಗಾಗಿ ಸಾಲುಗಟ್ಟಿ ನಿಂತರೂ ಹನಿ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಮ್ಸ್ ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಊಟ, ನೀರು ಹಾಗೂ ಮಾತ್ರೆ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿನ ಸಿಬ್ಬಂದಿ ರಾತ್ರಿ 10.30 ಅಥವಾ 11 ಗಂಟೆಗೆ ಮಾತ್ರೆಗಳನ್ನು ನೀಡುತ್ತಿದ್ದಾರೆ. ಅಷ್ಟು ತಡವಾಗಿ ನೀಡಿದ್ರೆ ಮಾತ್ರೆ ತಿಂದು, ಮಲಗೋದು ಯಾವಾಗ ಎಂದು ಸೋಂಕಿತರು ಪ್ರಶ್ನಿಸುತ್ತಿದ್ದಾರೆ.
ಕೊರೊನಾ ವಾರ್ಡ್ಗೆ ವೈದ್ಯರಂತು ಭೇಟಿ ನೀಡುವುದೇ ಇಲ್ಲ. ಎಲ್ಲವನ್ನು ನರ್ಸ್ಗಳಿಂದ ಮಾಡಿಸುತ್ತಿದ್ದಾರೆ. ಏನಾದರೂ ಪ್ರಶ್ನಿಸಿದ್ರೆ, ಇಲ್ಲಿನ ಸಿಬ್ಬಂದಿ ರೋಗಿಗಳನ್ನೇ ಬೆದರಿಸಿ ಸುಮ್ಮನಾಗುತ್ತಾರೆ. ಜಿಮ್ಸ್ನ ಕೋವಿಡ್ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ ಎಂದು ಸೋಂಕಿತರು ಆರೋಪಿಸುತ್ತಿದ್ದಾರೆ.