ಕಲಬುರಗಿ: ಇಂದು ನಡೆಯಬೇಕಿದ್ದ ಬಿ.ಇಡಿ ದ್ವಿತೀಯ ಮತ್ತು 4ನೇ ಸೆಮಿಸ್ಟರ್ ಪರೀಕ್ಷೆ ಹಾಗೂ ಸ್ನಾತಕ ಪದವಿಯ ಲಿಖಿತ ಪರೀಕ್ಷೆಗಳನ್ನು ಗುಲ್ಬರ್ಗಾ ವಿಶ್ವವಿದ್ಯಾಲಯ ಮುಂದೂಡಿಕೆ ಮಾಡಿದೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಗಣನೀಯ ಏರಿಕೆ ಮತ್ತು ಸಾರಿಗೆ ನೌಕರರ ಮುಷ್ಕರ ಕಾರಣ ಏಪ್ರಿಲ್ 19ರಿಂದ ಪ್ರಾರಂಭವಾಗಬೇಕಿದ್ದ ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿ.ಇಡಿ ದ್ವಿತೀಯ ಮತ್ತು 4ನೇ ಸೆಮಿಸ್ಟರ್ ಪರೀಕ್ಷೆ ಹಾಗೂ ಸ್ನಾತಕ ಪದವಿಯ ಲಿಖಿತ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಸೋನಾರ್ ನಂದಪ್ಪ ಡಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರು ಈ ವಿಷಯವನ್ನು ವಿದ್ಯಾರ್ಥಿಗಳ ಗಮನಕ್ಕೆ ತರಬೇಕು. ಮುಂದೂಡಲಾದ ಪರೀಕ್ಷೆಗಳ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.