ಕಲಬುರಗಿ: ವರುಣಾರ್ಭಟದಿಂದ ಭೀಮಾ ನದಿಗೆ ಬಂದ ಭೀಕರ ಪ್ರವಾಹದಿಂದಾಗಿ ಕಲಬುರಗಿ ತಾಲೂಕಿನ ಫೀರೋಜಾಬಾದ್ಗೆ ಅಪಾರ ಪ್ರಮಾಣದ ನೀರು ನುಗ್ಗಿ ಮಹಾಲಕ್ಷ್ಮಿ ಮಂದಿರ, ಅಂಬಿಗರ ಚೌಡಯ್ಯನ ಮಂದಿರ ಸೇರಿದಂತೆ ಹಲವು ಮನೆಗಳು ಮುಳುಗಡೆಯಾಗಿದ್ದವು. ಪ್ರತಿಬಾರಿ ಪ್ರವಾಹ ಬಂದಾಗಲೂ ಸಂಕಷ್ಟ ಅನುಭವಿಸಿ ರೋಸಿಹೋಗಿರುವ ಅಜ್ಜಿಯೊಬ್ಬರು ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಲ್ಲಮ್ಮ ಎಂಬ ಅಜ್ಜಿ ಮನೆ ಮಹಡಿ ಹತ್ತಿ ಕುಳಿತು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಮೂರು ದಿನಗಳಿಂದಲೂ ಮಹಡಿ ಏರಿ ಕುಳಿತ ಅಜ್ಜಿ, ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ. ಪ್ರವಾಹ ಬಂದು ನಮ್ಮ ಮನೆಗಳಿಗೆ ಹಾನಿಯಾಗಿದೆ. ಈವರೆಗೂ ಯಾರೂ ಬಂದು ವಿಚಾರಿಸಿಲ್ಲ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿ ಪ್ರವಾಹ ಬಂದಾಗಲೂ ಇದೇ ಪರಿಸ್ಥಿತಿ ಆಗುತ್ತದೆ. ಎತ್ತರದ ಸ್ಥಳದಲ್ಲಿ, ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಿಸಿಕೊಡುವಂತೆ ಅಜ್ಜಿ ಆಗ್ರಹಿಸಿದ್ದಾರೆ.