ಕಲಬುರಗಿ: ಇಲ್ಲಿನ ರೈಲು ನಿಲ್ದಾಣದ ಮುಂಭಾಗದ ಗೋಡೆಗೆ ಹಸಿರು ಬಣ್ಣ ಬಳೆಯಲಾಗಿದ್ದು, ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರೈಲು ನಿಲ್ದಾಣಕ್ಕೆ ಬಂದರೆ ಬೇರೊಂದು ಸ್ಥಳಕ್ಕೆ ಬಂದಿರುವಂತೆ ಭಾಸವಾಗುತ್ತಿದೆ. 15 ದಿನಗಳಲ್ಲಿ ಹಸಿರು ಬಣ್ಣ ತೆಗೆಯದಿದ್ದರೆ, ಇಡೀ ರೈಲ್ವೆ ನಿಲ್ದಾಣ ಕೇಸರಿಮಯ ಮಾಡುವುದಾಗಿ ಹಿಂದೂ ಪರ ಸಂಘಟನೆಗಳು ಖಡಕ್ ಎಚ್ಚರಿಕೆ ನೀಡಿವೆ.
ರೈಲು ನಿಲ್ದಾಣಕ್ಕೆ ಬಣ್ಣ ಬಳಿಯಲಾಗುತ್ತಿದ್ದು, ಮುಂಭಾಗದ ಎರಡು ಗೋಡೆಗಳಿಗೆ ಹಸಿರು ಬಣ್ಣ ಹಚ್ಚಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರೈಲು ನಿಲ್ದಾಣದ ಮುಂಭಾಗ ಪ್ರತಿಭಟಿಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಒಂದು ಸಮಾಜವನ್ನು ಓಲೈಸಲು ಉದ್ದೇಶಪೂರ್ವಕವಾಗಿ ಕೆಲ ಅಧಿಕಾರಿಗಳು ಇಂಥ ಕೃತ್ಯಕ್ಕೆ ಕೈಹಾಕಿದ್ದಾರೆ ಎಂದು ಗರಂ ಆಗಿದ್ದಾರೆ.
ರೈಲ್ವೆ ನಿಲ್ದಾಣಕ್ಕೆ ಪರ್ಯಾಯ ಬಣ್ಣ ಅಥವಾ ರಾಷ್ಟ್ರಧ್ವಜದ ತ್ರಿವರ್ಣ ಬಣ್ಣ, ಇಲ್ಲವೇ ಕರ್ನಾಟಕ ರಾಜ್ಯದ ಬಾವುಟದ ಬಣ್ಣ ಹಚ್ಚಬೇಕು. ಇಲ್ಲದಿದ್ದರೆ ಹಿಂದೂ ಜಾಗರಣ ವೇದಿಕೆಯಿಂದ ಇಡೀ ರೈಲ್ವೆ ನಿಲ್ದಾಣ ಕೇಸರಿಮಯ ಮಾಡಲಾಗುವುದು ಎಂದು ಹಿಂದೂ ಸಂಘಟನೆ ಮುಖಂಡ ಲಕ್ಷ್ಮಿಕಾಂತ ಸ್ವಾದಿ ಹೇಳಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಎಲೆಕ್ಷನ್‌ಗೂ ಮೊದಲೇ ಪ್ರಾಮಿಸ್ ಪಾಲಿಟಿಕ್ಸ್: ಗೆಳೆಯನ ಪರ ತೆಲ್ಕೂರ ಮತಬೇಟೆ
ಪ್ರತಿಭಟನೆಗೆ ಮಣಿದ ರೈಲ್ವೆ ಅಧಿಕಾರಿಗಳು ತಕ್ಷಣ ಬಣ್ಣ ಹಚ್ಚುವ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಸಮಜಾಯಿಸಿ ನೀಡಿದ ಅಧಿಕಾರಿಗಳು ಮೇಲಾಧಿಕಾರಿಗಳ ಆದೇಶದ ಮೇರೆಗೆ ಆರ್ಕಿಟೆಕ್ಚರ್ ಸಲಹೆಯಂತೆ ಬಣ್ಣ ಹಚ್ಚಲಾಗುತ್ತಿದೆ.
ಸದ್ಯ ವಿರೋಧ ವ್ಯಕ್ತವಾದ ಹಿನ್ನೆಲೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕೆಲಸವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಕೆಲಸ ನಿಲ್ಲಿಸಲಾಗಿದ್ದು, ಶೀಘ್ರವೇ ಚರ್ಚಿಸಿ ಪರ್ಯಾಯ ಬಣ್ಣವನ್ನು ಹಚ್ಚಲಾಗುವುದು ಎಂದು ರೈಲ್ವೆ ಅಧಿಕಾರಿ ಸತ್ಯನಾರಾಯಣ ದೇಸಾಯಿ ತಿಳಿಸಿದ್ದಾರೆ.