ಕಲಬುರಗಿ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಕಲಬುರಗಿ ಜಿಲ್ಲೆಯಾದ್ಯಂತ ಮೇ 27ರಿಂದ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್ ಮಾಡಿ ಜಿಲ್ಲಾಧಿಕಾರಿ ವಿವಿ ಜ್ಯೋತ್ನ್ಸಾ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಮೇ.27ರ ಬೆಳಿಗ್ಗೆ 6ಗಂಟೆಯಿಂದ ಮೇ.31ರ ಬೆಳಿಗ್ಗೆ 6ಗಂಟೆವರೆಗೆ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಹಾಲು, ಮೊಟ್ಟೆ, ಹೊಟೇಲ್ಗಳಲ್ಲಿ ಊಟ ಮತ್ತು ಉಪಹಾರ ಪಾರ್ಸಲ್ ಸೇವೆ ಲಭ್ಯ ಇರಲಿದೆ. ಆಸ್ಪತ್ರೆ, ಔಷಧಿ ಅಂಗಡಿಗಳು, ಆ್ಯಂಬುಲೆನ್ಸ್, ಅಗ್ನಿಶಾಮಕ, ಪೆಟ್ರೋಲ್ ಪಂಪ್ ಹಾಗೂ ಇತರೆ ತುರ್ತು ವೈದ್ಯಕೀಯ ಸೇವೆ ಎಂದಿನಂತೆ ಕಾರ್ಯನಿರ್ವಹಿಸಲಿವೆ. ರೈಸ್ ಮಿಲ್, ದಾಲ್ ಮಿಲ್ ಚಟುವಟಿಕೆಗಳಿಗೆ ಸ್ಥಳದಲ್ಲಿಯೇ ಲಭ್ಯವಿರುವ ಕಾರ್ಮಿಕರಿಂದ ಕಾರ್ಯನಿರ್ವಹಣೆಗೆ ಯಾವುದೇ ಅಡ್ಡಿಯಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕ್ರೂರಿ ಅಟ್ಟಹಾಸಕ್ಕೆ ಹೆಂಡ್ತಿ ಮಾತ್ರವಲ್ಲ, ಆಸರೆಗೆ ಇದ್ದ ಎಕರೆ ಜಮೀನು ಹೋಯ್ತು!
ತುರ್ತು ವೈದ್ಯಕೀಯ ಸೇವೆಗಳ ಸಂದರ್ಭದಲ್ಲಿ ಖಾಸಗಿ ಸಾರಿಗೆ ಸೇವೆ ಬಳಕೆಗೆ ಅವಕಾಶವಿದ್ದು, ವೈದ್ಯಕೀಯ ದಾಖಲೆಗಳನ್ನು ಚೆಕ್ ಪೋಸ್ಟ್ಗಳಲ್ಲಿ ತೋರಿಸಿ ಪ್ರಯಾಣಿಸಬಹುದು. ಇನ್ನುಳಿದಂತೆ ಎಲ್ಲ ರೀತಿಯ ಖಾಸಗಿ ಸಾರಿಗೆ ನಿರ್ಬಂಧಿಸಲಾಗಿದೆ. ಸರಕುಗಳ ಸಾಗಾಣಿಕೆಗೆ ಮತ್ತು ಖಾಲಿ ವಾಹನಗಳಿಗೆ ಅನುಮತಿಸಲಾಗಿದೆ.
ಕೃಷಿ ಸಂಬಂಧಿತ ಚಟುವಟಿಕೆಗಳು ಬೆಳಿಗ್ಗೆ 6ಗಂಟೆಯಿಂದ ಬೆಳಿಗ್ಗೆ 10ಗಂಟೆಯವರೆಗೆ ಮಾತ್ರ ಅನುಮತಿಸಿದೆ. ಬೀಜ, ರಸಗೊಬ್ಬರ, ಸಾಗಾಣಿಕೆ ಸಂಬಂಧ ರೈಲ್ವೆ ರೇಕ್‌ಗಳಲ್ಲಿ ಕಾರ್ಮಿಕರಿಗೆ ಅನುಮತಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಂಗಡಿ ಮುಂಗಟ್ಟುಗಳಿಗೆ ಅನುಮತಿ ಇರುವುದಿಲ್ಲ. ಮದುವೆಗೆ 10 ಜನ, ಅಂತ್ಯಕ್ರಿಯೆಗೆ 5 ಜನರಿಗೆ ಅವಕಾಶ ಇದೆ.