ಕಲಬುರಗಿ: ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವನ್ನು ಸ್ವಾಗತಿಸುತ್ತಲೇ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ಸಿಎಂ ಅವರ ಶಾಲೆಗಳಲ್ಲಿನ ವಾಸ್ತವ್ಯ ಶೋ ಆಫ್ ಆಗದಿರಲಿ ಎಂದು ಕುಟುಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧದ ಆರೋಪ, ಆಡಳಿತದ ವೈಫಲ್ಯ, ಮೈತ್ರಿ ಕಲಹ ಮರೆಮಾಚಿ ಜನರ ಗಮನ ಬೇರೆಡೆ ಸೆಳೆಯಲು ಸಿಎಂ ಈ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಗ್ರಾಮ ವಾಸ್ತವ್ಯಕ್ಕಾಗಿ ಕುಮಾರಸ್ವಾಮಿಯವರು ನನ್ನ ಕ್ಷೇತ್ರ ಅಫ್ಜಲ್ಪುರ ತಾಲೂಕನ್ನು ಆಯ್ಕೆ ಮಾಡಿರುವುದನ್ನು ಸ್ವಾಗತಿಸುತ್ತೇನೆ. ಆದ್ರೆ ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದ ಕಡೆಗಳಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ, ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಇಂದಿಗೂ ಮೂಲಸೌಕರ್ಯಗಳ ಕೊರತೆಯಿಂದ ಜನ ಪರದಾಡುತ್ತಿದ್ದಾರೆ. ತಾಲೂಕಿನ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಬ್ರಿಡ್ಜ್ ಕಮ್ ಬ್ಯಾರೇಜ್ ಕಾರ್ಯ ಕುಂಠಿತಗೊಂಡಿದೆ. ಪ್ರವಾಹ ಪೀಡಿತರಿಗೆ ಪುನರ್ವಸತಿ ಆಗಿಲ್ಲ. ಹೀಗಿರುವಾಗ ಗ್ರಾಮ ವಾಸ್ತವ್ಯ ಮಾಡಿದರೆ ಪ್ರಯೋಜನ ಏನು ಎಂದು ಗುತ್ತೇದಾರ್ ಪ್ರಶ್ನಿಸಿದ್ದಾರೆ.
ಇನ್ನು ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸಾಲ ಮನ್ನಾ ಘೋಷಣೆ ಮಾಡಿದ್ದರೂ ಸಹ ಅದರ ಸೌಲಭ್ಯ ರೈತರಿಗಿನ್ನೂ ತಲುಪಿಲ್ಲ. ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಿದ್ದ ಸಾಲ ಮನ್ನಾ ಕೂಡಾ ಸೌಲಭ್ಯ ಕೂಡ ಪೂರ್ತಿಯಾಗಿ ರೈತರಿಗೆ ಸಿಕ್ಕಿಲ್ಲ. ಬರಗಾಲ ಘೋಷಣೆ ಮಾಡಿದ್ದರೂ ಬರ ಕಾಮಗಾರಿಗಳು ನಡೀತಿಲ್ಲ. ಈ ಕೆಲಸಗಳ ಬಗ್ಗೆಯೇ ಮುತುವರ್ಜಿ ವಹಿಸದ ಮುಖ್ಯಮಂತ್ರಿಯವರು ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡುವುದರಿಂದ ಏನೂ ಉಪಯೋಗ ಆಗಲ್ಲವೆಂದು ಗುತ್ತೇದಾರ್ ಟೀಕಿಸಿದ್ದಾರೆ.