ಕಲಬುರಗಿ : ನನಗೆ ಬಂದಿರುವ ಕಷ್ಟ ಯಾರಿಗೂ ಬರಬಾರದು ಎಂದು ಮಾಜಿ ಸಚಿವ, ಕುಸ್ತಿ ಪಟು ರೇವೂ ನಾಯಕ ಬೆಳಮಗಿ ಕಣ್ಣೀರು ಹಾಕಿದ್ದಾರೆ.
ಕೊರೊನಾ ಸೋಂಕು ತಗುಲಿ ಗುಣಮುಖರಾದರೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ರೇವೂ ನಾಯಕ ಬೆಳಮಗಿಯವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸಿಗೆಯಲ್ಲಿಯೇ ಕಣ್ಣೀರು ಹಾಕಿದ ಅವರು, ನನಗಾಗಿದ್ದು ಮತ್ಯಾರಿಗೂ ಆಗಬಾರದು. ಕೈ ಜೋಡಿಸಿ ಹೇಳುತ್ತೇನೆ, ಯಾರೂ ನನ್ನ ಭೇಟಿ ಮಾಡಲು ಬರಬೇಡಿ. ನಿಮ್ಮ ಆಶೀರ್ವಾದ ಇರಲಿ. ಆ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ಹತ್ತಾರು ಕುಸ್ತಿಪಟುಗಳನ್ನು ಕೆಡವಿದ ಗಂಡುಗಲಿ ಈಗ ಬೆಡ್ ರೆಸ್ಟ್ನಲ್ಲಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬೆಳಮಗಿಯವರು ಮನೆಗೆ ಬಂದಿದ್ದಾರೆ. ಕೊರೊನಾ ನೆಗೆಟಿವ್ ಬಂದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೂ, ಬೆಳಮಗಿಯವರಿಗೆ ಮತ್ತೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ, ಆಕ್ಸಿಜನ್ ನೆರವಿನೊಂದಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಅಭಿಮಾನಿಗಳು ಮನೆಗೆ ಬಂದು ಆರೋಗ್ಯ ವಿಚಾರಿಸುತ್ತಿದ್ದಾರೆ. ಹೀಗಾಗಿ, ಯಾರೂ ಭೇಟಿಗೆ ಬರಬೇಡಿ ಎಂದು ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.