ಕಲಬುರಗಿ: ಕಲ್ಯಾಣ ಕರ್ನಾಟಕದ ಜನತೆಗೆ ಮುಂಬೈ ಇದೀಗ ಮತ್ತಷ್ಟು ಹತ್ತಿರವಾಗಿದೆ. ಇದೇ ತಿಂಗಳ 25ರಿಂದ ವಾರದ ಏಳು ದಿನವೂ ಕಲಬುರಗಿ - ಮುಂಬೈ ನಗರಗಳ ಮಧ್ಯೆ ವಿಮಾನ ಸಂಚಾರ ಆರಂಭಗೊಳ್ಳಲಿದೆ.
ಅಲಯನ್ಸ್ ಏರ್ ಸಂಸ್ಥೆ ಪ್ರತೀ ನಿತ್ಯ ವಿಮಾನ ಸೇವೆ ಪ್ರಾರಂಭಿಸಲಿದೆ. ಇಂದಿನಿಂದಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ 25ರಿಂದ ಬೆಳಗ್ಗೆ 7.25ಕ್ಕೆ ಮುಂಬೈನಿಂದ ಹಾರುವ ವಿಮಾನ ಬೆಳಗ್ಗೆ 9ಕ್ಕೆ ಕಲಬುರಗಿಗೆ ಬಂದು ತಲುಪಲಿದೆ.
ಅದರಂತೆ ಬೆಳಗ್ಗೆ 9.25ಕ್ಕೆ ಕಲಬುರಗಿಯಿಂದ ಹೊರಡುವ ವಿಮಾನ ಬೆಳಗ್ಗೆ 10:55ಕ್ಕೆ ಮುಂಬೈ ತಲುಪಲಿದೆ. 70 ಸೀಟುಗಳ ಸಾಮರ್ಥ್ಯವುಳ್ಳ ವಿಮಾನ ಇದಾಗಿದೆ. ವಾಣಿಜ್ಯ ನಗರಿಗೆ ವಿಮಾನ ಹಾರಾಟ ಮಾಡುತ್ತಿರುವುದರಿಂದ ಕಲ್ಯಾಣ ಕರ್ನಾಟಕದ ವಾಣಿಜ್ಯೋದ್ಯಮಿಗಳಿಗೆ ಬಹಳಷ್ಟು ಸಹಕಾರಿಯಾಗಲಿದೆ.