ಸೇಡಂ: ವಿಧಾನಸಭಾ ವ್ಯಾಪ್ತಿಯ 35 ಗ್ರಾಮ ಪಂಚಾಯತ್ಗಳ ಪೈಕಿ 22ರಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಅಧಿಕಾರ ಹಿಡಿದಿದ್ದಾರೆ. ಈ ಮೂಲಕ ಬಿಜೆಪಿಯ ದುರಾಡಳಿತವನ್ನು ಜನ ತಿರಸ್ಕರಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರರ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮುಗ್ಗರಿಸಿದೆ. ಚುನಾವಣೆಗೂ ಮುನ್ನ 22 ಗ್ರಾಪಂಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿಕೆ ನೀಡಿದ್ದ ಶಾಸಕರು ಈಗ ಎಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ಬರೀ ಸುಳ್ಳು ಹೇಳಿ ಅಧಿಕಾರ ನಡೆಸುತ್ತಿದ್ದಾರೆ. ಜನ ಯಾರ ಪರ ಒಲವು ಹೊಂದಿದ್ದಾರೆ ಎಂಬುವುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಾಬೀತಾಗಿದೆ. ಮುಂಬರುವ ದಿನಗಳಲ್ಲೂ ಕೂಡ ಕ್ಷೇತ್ರದ ಜನ ದುರಾಡಳಿತವನ್ನು ಸಹಿಸಲ್ಲ ಎಂದು ಹೇಳಿದರು.
ಓದಿ : ಶೀಘ್ರದಲ್ಲೇ ಗಡಿ ಜಿಲ್ಲೆಗೆ 'ಜಾನಪದ ಕಲೆಗಳ ನಾಡು' ಎಂಬ ಸ್ವಾಗತ ಕಮಾನು: ಸಚಿವ ಸುರೇಶ್ ಕುಮಾರ್
ಸೇಡಂ ವಿಧಾನಸಭಾ ವ್ಯಾಪ್ತಿಯ ಚಿಂಚೋಳಿ ತಾಲೂಕಿನ ಕೆರಳ್ಳಿ ಮತ್ತು ಹೊಡೇಬೀರನಹಳ್ಳಿ ಹಾಗೂ ಸೇಡಂನ ಬಟಗೀರಾ ಬಿ ಗ್ರಾಪಂಗಳಿಗೆ ಕಾರಣಾಂತರಗಳಿಂದ ಚುನಾವಣೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಅವು ಕೂಡ ಕಾಂಗ್ರೆಸ್ ಪಾಲಾಗಲಿವೆ. ಸೇಡಂ ವ್ಯಾಪ್ತಿಯಲ್ಲಿ ಕಾಂಗ್ರೆಸ್ಗೆ ಬಹುಮತವಿರುವ ಮೂರು ಗ್ರಾಪಂಗಳಲ್ಲಿ ಟಾಸ್ ಮೂಲಕ ಬಿಜೆಪಿ ಅಧಿಕಾರ ಹಿಡಿದಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಅಧ್ಯಕ್ಷ ರವೀಂದ್ರ ಇಟಕಾಲ, ಎಪಿಎಂಸಿ ಅಧ್ಯಕ್ಷ ಹೇಮರೆಡ್ಡಿ ಕಲಕಂಭ, ಹಾಪ್ಕಾಮ್ಸ್ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಊಡಗಿ, ರುದ್ರು ಪಿಲ್ಲಿ, ಪುರಸಭೆ ಸದಸ್ಯ ಸಂತೋಷ ತಳವಾರ, ಗಫೂರ, ಮೈನೋದ್ದಿನ್ ಕಾಳಗಿ, ಇಮ್ರಾನ್ ಖಾನ್, ಸತ್ತಾರ ನಾಡೇಪಲ್ಲಿ, ಸಿದ್ದು ಬಾನಾರ, ನಾಗೇಶ್ವರರಾವ ಮಾಲಿಪಾಟೀಲ, ವಿಶ್ವನಾಥರೆಡ್ಡಿ ಪಾಟೀಲ ಮುನ್ನಾಗೌಡ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.