ಕಲಬುರಗಿ: ಮಳೆಗಾಲ ಆರಂಭವಾಗ್ತಿದ್ದಂತೆ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾದಂತಹ ಮಾರಕ ರೋಗಗಳು ಜೀವ ಪಡೆದು ಕೊಳ್ಳುತ್ತವೆ. ಪ್ರತಿ ವರ್ಷ ಆರೋಗ್ಯ ಇಲಾಖೆ ಇವುಗಳಿಗೆ ಕಡಿವಾಣ ಹಾಕಲು ಶತಪ್ರ ಯತ್ನ ಮಾಡಿದ್ರೂ ಸೋಂಕು ಹರಡುವಿಕೆ ಹೆಚ್ಚಾಗಿರುತ್ತೆ. ಈ ವರ್ಷ ಕೋವಿಡ್ ಕಾರಣಕ್ಕೆ ಜನರಲ್ಲಿ ಸ್ವಚ್ಛತೆ ಬಗ್ಗೆ ಮೂಡಿದ ಜಾಗೃತಿಯಿಂದ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷದಲ್ಲಿ ಇತರೆ ಸೋಂಕು ರೋಗಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿವೆ.
ಕಳೆದ ವರ್ಷ ಜನವರಿಯಿಂದ ಅಗಷ್ಟ್ವರೆಗೆ ಜಿಲ್ಲೆಯಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ 137 ಇತ್ತು. ಈ ವರ್ಷ ಇದೇ ಅವಧಿಯಲ್ಲಿ ಕೇವಲ 50 ರೋಗಿಗಳಿದ್ದಾರೆ. ಆರೋಗ್ಯ ಇಲಾಖೆ ಕೋವಿಡ್ ಜೊತೆಗೆ ಲಾರ್ವಾ ಸರ್ವೆ ಬಗ್ಗೆ ಕೂಡಾ ಗಮನ ಹರಿಸಲಾಗುತ್ತಿದ್ದು, ಕಳೆದ ವರ್ಷ ಜನವರಿಯಿಂದ ಅಗಷ್ಟ್ವರೆಗೆ 103 ಚಿಕನಗುನ್ಯಾ ರೋಗಿಗಳಿದ್ದರು. ಆದರೆ ಈ ವರ್ಷ ಈ ಅವಧಿಗೆ ಕೇವಲ 57 ಜನ ರೋಗಿಗಳಿದ್ದಾರೆ.
ಈ ಕುರಿತು ಮಾತನಾಡಿದ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಶೇಖರ, ಕೊರೊನಾ ಭೀತಿಯಿಂದ ಸ್ವಚ್ಛತೆಗೆ ಆದ್ಯತೆ ನೀಡಿದ ಕಾರಣ, ಸಾಂಕ್ರಾಮಿಕ ರೋಗಗಳು ಕಡಿಮೆಯಾಗಿವೆ. ಇದರ ಪರಿಣಾಮ ಈ ವರ್ಷ ಇಲ್ಲಿಯವರೆಗೆ ಡೆಂಗ್ಯೂದಂತ ಮಾರಕ ಕಾಯಿಲೆಯಿಂದ ಯಾರೊಬ್ಬರು ಮೃತರಾಗಿಲ್ಲ ಎಂದರು.
ನಗರದ ಕೊಳಗೇರಿ ಪ್ರದೇಶ ಹಾಗೂ ಗ್ರಾಮೀಣ ಭಾಗಗಳಲ್ಲಿ ಇನ್ನು ಸ್ಪಲ್ಪ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದ್ದು, ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ಸ್ಥಳ, ಚರಂಡಿಗಳ ಸ್ವಚ್ಛತೆ ಕಾರ್ಯ ಮಾಡಬೇಕಿದೆ ಎಂದು ಅವರು ತಿಳಿಸಿದರು.