ಕಲಬುರಗಿ: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಕಾರ್ಡ್ ನೀಡುವ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಎನ್.ಹೆಚ್.ಎಂ. ಜಿಲ್ಲಾ ಆರೋಗ್ಯ ಮಿಷನ್ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕು ಆಸ್ಪತ್ರೆ ಮತ್ತು ಸಿ.ಹೆಚ್.ಸಿ.ಯಲ್ಲಿ ಸಮರ್ಪಕ ನೊಂದಣಿ ಪ್ರಕ್ರಿಯೆ ನಡೆಸದ ಕಾರಣ ಸಾರ್ವಜನಿಕರು ಜಿಲ್ಲಾ ಆಸ್ಪತ್ರೆಗೆ ಧಾವಿಸುತ್ತಿದ್ದು, ಇದರಿಂದ ಆಸ್ಪತ್ರೆಯಲ್ಲಿ ಜನಸಂದಣಿ ಹೆಚ್ಚಾಗಿ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ತಾಲೂಕು ಹಂತದಲ್ಲಿ ನೊಂದಣಿ ಅಷ್ಟು ತೃಪ್ತಿಕರವಾಗಿಲ್ಲ, ನೊಂದಣಿ ಪ್ರಕ್ರಿಯೆ ತೀವ್ರಗೊಳಿಸಿ ಎಂದರು.
ಜಿಲ್ಲೆಯಲ್ಲಿ ಶಿಶು ಮರಣ-ತಾಯಿ ಮರಣ ಪ್ರಮಾಣ ತಗ್ಗಿಸಲು ವಿಶೇಷ ಕ್ರಮಕೈಗೊಳ್ಳಿ, ಗರ್ಭಿಣಿಯರ ನೋಂದಣಿ ಕಾರ್ಯ ನಿಧಾನಗತಿ ಸಹಿಸುವುದಿಲ್ಲ. ಗರ್ಭಿಣಿಯರು, ಬಾಣಂತಿಯರಿಗೆ ತುರ್ತು ರಕ್ತದ ಅವಶ್ಯವಿದ್ದಲ್ಲಿ ಸಮರ್ಪಕವಾಗಿ ರಕ್ತ ಸಿಗುವಂತಾಗಬೇಕು. ಇದಕ್ಕಾಗಿ ಟಿ.ಹೆಚ್.ಓ.ಗಳು ಹೆಚ್ಚಿನ ರಕ್ತದಾನ ಶಿಬಿರ ಆಯೋಜಿಸಿ ಯುವಕರು ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು. ಆದರೆ ಇದು ವಾಸ್ತವವಾಗಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅನಧಿಕೃತವಾಗಿ ಯಾವುದೇ ರಕ್ತ ನಿಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಲ್ಲಿ ಕೂಡಲೇ ಅಂಥವರ ವಿರುದ್ಧ ಕೇಸ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.108 ಅಂಬ್ಯುಲೆನ್ಸ್ ಸೇವೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದು, ಇ.ಎಂ.ಆರ್.ಐ. ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದು ತಿಳಿಸಿದರು.