ಕಲಬುರಗಿ : ಕೊರೊನಾ ಹಿನ್ನೆಲೆ ಬಹುತೇಕ ವ್ಯಾಪಾರ, ವಹಿವಾಟುಗಳು ನೆಲಕಚ್ಚಿದ್ದರಿಂದಾಗಿ ವ್ಯಾಪಾರಸ್ಥರು ಇಂದಿಗೂ ಪರದಾಡುತ್ತಿದ್ದಾರೆ. ಆದರೆ, ಒಂದೇ ಒಂದು ಕಾರಣಕ್ಕೆ ಮೊಟ್ಟೆ ವ್ಯಾಪಾರ ಮಾತ್ರ ಜೋರಾಗಿದ್ದು, ಬೆಲೆಯಲ್ಲಿಯೂ ಏರಿಕೆಯಾಗುತ್ತಿದೆ.
ಕೋವಿಡ್ ಲಾಕ್‌ಡೌನ್ ನಂತರ ವ್ಯಾಪಾರ, ವಹಿವಾಟುಗಳು ಕ್ರಮೇಣ ಚೇತರಿಕೆ ಆಗುತ್ತಿವೆ. ಇನ್ನೂ ಹಲವು ವ್ಯಾಪಾರಗಳು ಆರ್ಥಿಕ ಮುಗ್ಗಟ್ಟಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೊಟ್ಟೆ ವ್ಯಾಪಾರ ಮಾತ್ರ ಬರಪೂರ ನಡೆದಿದೆ.
ಕೊರೊನಾದಿಂದ ದೂರವಿರಲು ಮನುಷ್ಯನ ದೇಹದಲ್ಲಿ ವಿಟಮಿನ್ ಹೆಚ್ಚಿರಬೇಕು. ಮೊಟ್ಟೆ ಸೇವಿಸಿದ್ರೆ ವಿಟಮಿನ್ ಹೆಚ್ಚಾಗಿ ಉತ್ಪತ್ತಿಯಾಗುತ್ತದೆಂದು ಕೆಲ ವೈದ್ಯರು ಸೂಚನೆ ನೀಡಿದ ಬಳಿಕ ಮಾರುಕಟ್ಟೆಯಲ್ಲಿ ಮೊಟ್ಟೆಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಿದೆ.
ಸಾಮಾನ್ಯ ದಿನಗಳಲ್ಲಿ 3-4 ರೂಪಾಯಿ ಇದ್ದ ಒಂದು ಮೊಟ್ಟೆಯ ಬೆಲೆ ಇದೀಗ ಬೆಲೆ ₹6 ಆಗಿದೆ. ಅಂದ್ರೇ ನೂರು ಮೊಟ್ಟೆ ಬೆಲೆ 600 ರೂಪಾಯಿ. ಈ ಹಿಂದೆ ಎರಡ್ಮೂರು ದಿನಕ್ಕೆ ಒಂದು ಲೋಡ್ ಮೊಟ್ಟೆ ಮಾರಾಟ ಆಗುತಿತ್ತು. ಆದ್ರೀಗ ದಿನಕ್ಕೆ ಒಂದು ಲೋಡ್ ಅಂದ್ರೆ ಒಂದು ಲಕ್ಷ ಮೊಟ್ಟೆ ಮಾರಾಟ ಆಗ್ತಿವೆ ಅಂತಿದ್ದಾರೆ ಹೋಲ್ಸೇಲ್ ಅಂಗಡಿ ವ್ಯಾಪಾರಿಗಳು.
ಆರೋಗ್ಯ ವೃದ್ಧಿ ಜೊತೆಗೆ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಜನ ಮೊಟ್ಟೆ ಮೊರೆ ಹೋಗಿದ್ದು, ಇದು ವ್ಯಾಪಾರಿಗಳ ಮುಖದಲ್ಲಿ ಸಂತಸ ಮೂಡಿಸಿದೆ.