ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಮತ್ತೆ ಲಘು ಭೂಕಂಪನದ ಅನುಭವವಾಗಿದ್ದು, ಭೂಮಿಯಿಂದ ವಿಚಿತ್ರ ಸದ್ದು ಕೇಳಿಬಂದಿದೆ.
ಭೂಕಂಪನದಿಂದ ಭಯಭೀತರಾದ ಜನರು ತಂಡೋಪತಂಡವಾಗಿ ಹೊಲ, ದೇವಸ್ಥಾನ, ರಸ್ತೆಗಳಲ್ಲಿ ರಾತ್ರಿ ಕಳೆದಿದ್ದಾರೆ. ನಸುಕಿನ ಜಾವ 3.30 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನಂತರದ ಮುಂದಿನ ಅರ್ಧ ಗಂಟೆಯಲ್ಲಿ ಏಳು ಬಾರಿ ಭೂಮಿಯಿಂದ ಸಿಡಿ ಮದ್ದು ಸಿಡಿದಂತಹ ವಿಚಿತ್ರ ಸದ್ದು ಕೇಳಿಬಂದಿದೆ. ಇದರಿಂದ ಗಾಬರಿಯಾಗಿದ್ದು ಹತ್ತಿರದ ಹೊಲಗಳಲ್ಲಿ, ದೇವಸ್ಥಾನಗಳಲ್ಲಿ, ರಸ್ತೆಗಳಲ್ಲಿ ಆತಂಕದಿಂದ ರಾತ್ರಿ ಕಳೆದಿದ್ದೇವೆ ಎಂದು ಗ್ರಾಮದ ಸಮಾಜ ಸೇವಕ ಅರುಣ ರಂಗನೂರ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಪದೇ ಪದೇ ಇಂತಹ ಆತಂಕಕಾರಿ ಅನುಭವವಾಗುತ್ತಲೇ ಇದೆ. ಇದಕ್ಕೆ ಕಾರಣ ಏನು ಅನ್ನೋದು ಪತ್ತೆ ಮಾಡಿ ಜನರ ಆತಂಕ ದೂರ ಮಾಡಬೇಕು. ಜನರ ಪ್ರಾಣಕ್ಕೆ ಸಂಚಕಾರ ಬರಬಹುದು ಎನ್ನುವುದಾದರೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಜಿಲ್ಲಾಡಳಿಯ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.