ಕಲಬುರಗಿ: ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ರೌಡಿ ಪರೇಡ್ ನಡೆಯಿತು. ಇದರಲ್ಲಿ 65 ರೌಡಿ ಶೀಟರ್ಗಳು ಹಾಜರಾಗಿದ್ದರು. ಉತ್ತಮ ನಾಗರಿಕರಾಗಿ ಬದಲಾಗಿ, ಇಲ್ಲದಿದ್ರೆ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿವೈಎಸ್ಪಿ ಸಾಲಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಆಳಂದ ತಾಲೂಕಿನ ನಿಂಬರ್ಗಾದಲ್ಲಿ ಈ ಪರೇಡ್ ಏರ್ಪಡಿಸಲಾಗಿತ್ತು. ಮುಂಬರುವ ಜಿಪಂ, ತಾಪಂ ಚುನಾವಣೆ, ಗಣೇಶ ಚತುರ್ಥಿ ಗಮನದಲ್ಲಿಟ್ಟುಕೊಂಡು ರೌಡಿ ಪರೇಡ್ ನಡೆಸಲಾಯಿತು. ಈ ವೇಳೆ ರೌಡಿಗಳಿಗೆ ಬುದ್ಧಿವಾದ ಹೇಳಿದ ಡಿವೈಎಸ್ಪಿ ಸಾಲಿ, ಸಮಾಜಘಾತುಕ ಕೆಲಸಗಳು, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಭಯ ಹುಟ್ಟಿಸುವುದು, ದರ್ಪ ತೋರುವುದು ಮಾಡಿದರೆ ಬಂಧಿಸಿ ಕಠಿಣ ಶಿಕ್ಷೆ ನೀಡುವುದಾಗಿ ಹೇಳಿದರು.
ಕಾನೂನು ಬಾಹಿರ ದಂಧೆಗಳನ್ನು ಬಿಟ್ಟು ಉತ್ತಮ ನಾಗರೀಕರಾಗಿ ಬದಲಾಗಿ ಯಾವುದಾದರೂ ಪಕ್ಷದ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿ, ಮತದಾರರಿಗೆ ಮತದಾನದ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಿ. ಅದನ್ನು ಬಿಟ್ಟು ಮತ್ತೆ ರೌಡಿಸಂಗೆ ಇಳಿದ್ರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದರು.
ರೌಡಿಗಳಿಗೆ ಬುದ್ಧಿವಾದ ಹೇಳಿದ ಪಿಎಸ್ಐ:
ರೌಡಿಶೀಟರ್ ಆಗಿರುವುದು ಸಮಾಜಕ್ಕೆ ದೊಡ್ಡ ಕಳಂಕ. ಎಲ್ಲಾ ಕೆಟ್ಟಕೆಲಸ ಬಿಟ್ಟು ಸಮಾಜದಲ್ಲಿ ಪ್ರತಿಯೊಬ್ಬರ ಜೊತೆ ಅನ್ಯೋನ್ಯವಾಗಿ ಎಲ್ಲರೊಂದಿಗೆ ಬೆರೆತು ನಡೆಯಬೇಕು. ನೀವು ಉತ್ತಮ ನಾಗರೀಕರಾಗಿ ಬದಲಾಗಿರುವುದು ಮನದಟ್ಟಾದರೆ ನಿಮ್ಮನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ನಿಂಬರ್ಗಾದ ಪಿಎಸ್ಐ ಸುವರ್ಣ ಮಾಲಾಶೆಟ್ಟಿ ರೌಡಿಶೀಟರ್ಗಳಿಗೆ ಬುದ್ದಿವಾದ ಹೇಳಿದರು.
ಈ ವೇಳೆ ಪೋಲಿಸ್ ಸಿಬ್ಬಂದಿ ಶ್ರೀಕಾಂತ ಸುತ್ತಾರ, ಭೀಮಾಶಂಕರ ಉಡಗಿ, ಶರಣಮ್ಮಾ ಸಿಂಗೆ ಮತ್ತಿತರರು ಇದ್ದರು.