ಸೇಡಂ: ತಾಲೂಕಿನ ಮಳಖೇಡ ಗ್ರಾಮದ ಕಾಗೀಣಾ ನದಿಯ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರನ್ನು ಭೇಟಿಯಾದ ಸಂಸದ ಡಾ. ಉಮೇಶ ಜಾಧವ್ ಪರಿಸ್ಥಿತಿ ಆಲಿಸಿದರು.
ಗ್ರಾಮದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಅವರು, ನಿರಾಶ್ರಿತರಿಗೆ ಕಲ್ಪಿಸುತ್ತಿರುವ ಆಹಾರ ಮತ್ತು ಸರ್ವೇ ಕಾರ್ಯದ ಬಗ್ಗೆ ಸ್ಥಳದಲ್ಲೇ ಇದ್ದ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ ಅವರಿಂದ ಮಾಹಿತಿ ಪಡೆದುಕೊಂಡರು.
ನಮಗೆ ಸರಿಯಾದ ಊಟದ ವ್ಯವಸ್ಥೆ ಇಲ್ಲ. ಅನ್ನ ನೀರು ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದೇವೆ. ಯಾರೂ ಸಹ ನಮ್ಮ ಸಮಸ್ಯೆ ಆಲಿಸಲು ಬಂದಿಲ್ಲ ಎಂದು ಸಂತ್ರಸ್ತರು ಇದೇ ವೇಳೆ ಸಂಸದ ಉಮೇಶ ಜಾಧವ ಎದುರು ಅಳಲು ತೋಡಿಕೊಂಡರು.
ನಂತರ ಐತಿಹಾಸಿಕ ಸುಕ್ಷೇತ್ರ ಉತ್ತರಾಧಿ ಮಠದ ಜಯತೀರ್ಥರ ಮೂಲ ಬೃಂದಾವನಕ್ಕೆ ಭೇಟಿ ನೀಡಿದ ಅವರು, ಅರ್ಚಕ ವೆಂಕಣ್ಣಾಚಾರ್ ಅವರಿಂದ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು. ಅವರೊಂದಿಗೆ ಈಶಾನ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸಹ ಇದ್ದರು.