ಕಲಬುರಗಿ: ಶಸ್ತ್ರಚಿಕಿತ್ಸೆ ಮಾಡೋ ವೈದ್ಯರೇ ಇಂದು ಹಲವು ರೀತಿಯ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಮಂಜುನಾಥ್ ಹೇಳಿದ್ದಾರೆ.
ಇಂದು ಕಲಬುರಗಿಯಲ್ಲಿ ಮಾತನಾಡಿದ ಡಾ. ಮಂಜುನಾಥ, ಜಿಲ್ಲೆಯ ಹೃದಯ ಭಾಗದಲ್ಲಿರುವ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ (ಡಿಎಸ್ಓ) ಇಲಾಖೆ ಕಚೇರಿ ಹಿಂದೆ ಇರುವ ಜಾಗದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ತಿಳಿಸಿದ್ರು. ಈ ಹಿಂದೆ ಸಂಚಿವ ಸಂಪುಟ ಒಪ್ಪಿಗೆ ನೀಡಿದಂತೆ 300 ಹಾಸಿಗೆಯ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ 150 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಫೆಬ್ರವರಿ ತಿಂಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಿದ್ದು, ಮೂರು ವರ್ಷಗಳಲ್ಲಿ ಸುಸಜ್ಜಿತವಾದ ಜಯದೇವ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ವೈದ್ಯರ ಮೇಲೆಯೇ ಹೆಚ್ಚಿನ ದುಷ್ಪರಿಣಾಮ!
ಜಯದೇವ ಸಂಸ್ಥೆ ದೇಶದಲ್ಲಿಯೇ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವೈದ್ಯರ ಮೇಲೆ ಒತ್ತಡವೂ ಹೆಚ್ಚಿದೆ. ಎಂಜಿಯೋಗ್ರಾಮ್ ಮತ್ತು ಎಂಜಿಯೋಪ್ಲಾಸ್ಟ್ ವೈದ್ಯರ ಮೇಲೆ ರೇಡಿಯೇಷನ್ ದುಷ್ಪರಿಣಾಮವಾಗುತ್ತಿದೆ. ಬ್ರೈನ್ ತೊಂದರೆ, ಥೈರಾಯ್ಡ್, ಬೋನ್ ಮಾರೋ ಮೊದಲಾದ ಕಾಯಿಲೆಗಳಿಗೆ ಗುರಿಯಾಗುವಂತಾಗಿದೆ. ಜಯದೇವ ಸಂಸ್ಥೆಯೊಂದರಲ್ಲಿಯೇ 15 ವೈದ್ಯರು ಸಮಸ್ಯೆಗೆ ಗುರಿಯಾಗಿದ್ದಾರೆ ಎಂದರು. ಇದರ ಜೊತೆಗೆ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರಿಗೂ ತೊಂದರೆಯಾಗುತ್ತಿದೆ. ಆದರೂ ಸಹ ನಮ್ಮ ವೈದ್ಯಕೀಯ ಸೇವೆಯನ್ನು ಪ್ರಾಮಾಣಿಕವಾಗಿ ಮುಂದುವರೆಸಿರುವುದಾಗಿ ಮಂಜುನಾಥ ತಿಳಿಸಿದ್ದಾರೆ.