ಕಲಬುರಗಿ : ಬೆಳಕು ಹೊತ್ತು ತರುವ ದೀಪಾವಳಿ ಈ ಬಾರಿ ಕೊರೊನಾ ಕಾರ್ಮೋಡದಲ್ಲಿಯೇ ನಡೆಯುತ್ತಿದೆ. ಖರೀದಿ, ವ್ಯಾಪಾರ, ಕೊಡುಕೊಳ್ಳುವಿಕೆ ಜೋರಾಗಿದ್ದು, ಹಬ್ಬದ ಸಡಗರದಲ್ಲಿರುವ ಜಿಲ್ಲೆಯ ಜನ ಕೊರೊನಾದ ಭಯವನ್ನೇ ಮರೆತಿದ್ದಾರೆ.
ಇಲ್ಲಿನ ಸೂಪರ್ ಮಾರುಕಟ್ಟೆಯು ಜನಜಂಗುಳಿಯಿಂದ ತುಂಬಿದ್ದು ಸ್ಯಾನಿಟೈಸಜರ್ ಬಳಕೆ, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಎಲ್ಲಿಯೂ ಸಿಗಲಿಲ್ಲ.
ಹಬ್ಬದ ಅಲಂಕಾರಿಕ ವಸ್ತುಗಳು ಮತ್ತು ದೀಪಗಳ ಖರೀದಿಯಲ್ಲಿ ತೊಡಗಿರುವ ಜನ ಕೊರೊನಾಕ್ಕೂ ಜಾಗ ಕೊಡದ ರೀತಿಯಲ್ಲಿ ಓಡಾಡುತ್ತಿದ್ದಾರೆ. ಕೊರೊನಾ ಇದ್ದರೇನೂ ನಮಗೆ ಹಬ್ಬ ಅನಿವಾರ್ಯ ಎಂದು ಜನ ಹೇಳಿದರೆ, ಇದೇ ಕಾರಣದಿಂದಾಗಿ ನಿರೀಕ್ಷಿತ ವ್ಯಾಪಾರವಾಗುತ್ತಿಲ್ಲ ಅಂತ ವ್ಯಾಪಾರಿಗಳು ತಮ್ಮ ನೋವು ಹೇಳಿಕೊಳ್ಳುತ್ತಿದ್ದಾರೆ.
ಪ್ರಣತಿ, ಆಕಾಶಬುಟ್ಟಿಗಳ ಮಾರಾಟ ಇಳಿಮುಖವಾಗಿದ್ದು, ಪ್ರತಿ ವರ್ಷಕ್ಕೆ ಹೋಲಿಸಿದಲ್ಲಿ ವ್ಯಾಪಾರ ಒಂದಷ್ಟು ಡಲ್ ಎನಿಸಿಕೊಂಡಿದೆ.
ಪಟಾಕಿ ವ್ಯಾಪಾರ ಡಲ್ : ಕೊರೊನಾ ಹಿನ್ನೆಲೆ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿರುವ ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದೆ. ಸರ್ಕಾರದ ನಿಯಮಾವಳಿಯ ಕಾರಣಕ್ಕೆ ಕಲಬುರಗಿಯಲ್ಲಿ ಪಟಾಕಿ ವ್ಯಾಪಾರ ಡಲ್ ಆಗಿದೆ. ಕಲಬುರಗಿಯ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಪಟಾಕಿ ವ್ಯಾಪಾರ ನಡೆಯುತ್ತಿದೆ.
ಮೈದಾನದಲ್ಲಿ 34 ಮಳಿಗೆಗಳ ಸ್ಥಾಪನೆ ಮಾಡಲಾಗಿದ್ದು, ಬಹುತೇಕ ಮಳಿಗೆಗಳು ಖಾಲಿ ಖಾಲಿಯಾಗಿವೆ. ಕೆಲ ಮಳಿಗೆಗಳಲ್ಲಿ ಮಾತ್ರ ಪಟಾಕಿ ಇಡಲಾಗಿದೆ. ಕೆಲವಡೆ ಹಸಿರು ಪಟಾಕಿ ಜೊತೆ ಬೇರೆ ಪಟಾಕಿಗಳು ನುಸುಳಿವೆ. ಆದರೆ, ಬಹುತೇಕ ಕಡೆ ವ್ಯಾಪಾರಿಗಳು ಹಸಿರು ಪಟಾಕಿ ಇಟ್ಟಿದ್ದಾರೆ.
ಬರೀ ಹಸಿರು ಪಟಾಕಿ ಅನ್ನೋ ಕಾರಣಕ್ಕೆ ಪಟಾಕಿ ವೆರೈಟಿಗಳಲ್ಲಿ ಇಳಿಮುಖವಾಗಿದೆ. ದರವೂ ತುಸು ದುಬಾರಿಯಾಗಿದ್ದು, ಹಬ್ಬ ಬಂದಿದ್ದರೂ ಗ್ರಾಹಕರ ಕೊರತೆ ಎದ್ದು ಕಾಣುತ್ತಿದೆ. ಗ್ರಾಹಕರಿಲ್ಲದ ಪಟಾಕಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಸರ್ಕಾರದ ನಿಯಮದಂತೆ ಹಸಿರು ಪಟಾಕಿ ಇಟ್ಟಿದ್ದೇವೆ. ಆದರೂ ವ್ಯಾಪಾರ ಮಾತ್ರ ತುಂಬಾ ಡಲ್ ಇದೆ. ಪಟಾಕಿ ಮಾರಾಟಕ್ಕೂ ಕಾಲಾವಧಿ ನೀಡಿದ್ದರಿಂದ ಈ ಬಾರಿ ನಷ್ಟ ತಪ್ಪಿದ್ದಲ್ಲ ಅನ್ನುತ್ತಿದ್ದಾರೆ ವರ್ತಕರು.