ಕಲಬುರಗಿ: ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಶಹಾಬಾದ್ ಪಟ್ಟಣಕ್ಕೆ ಭೇಟಿ ನೀಡಿ ಲಾಕ್ಡೌನ್ ಭದ್ರತೆ ಪರಿಶೀಲಿಸಿದರು.
ಶಹಾಬಾದ್ ಪಟ್ಟಣದ ಅಪ್ಪರ್ ಮಡ್ಡಿ ಪ್ರದೇಶದ ಮಹಿಳೆಗೆ ಕೊರೊನಾ ಸೋಂಕು ಕಂಡು ಬಂದಿರುವ ಹಿನ್ನೆಲೆ ಪ್ರದೇಶವನ್ನು ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಿರುವುದರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಿಲ್ಲೆಯಾದ್ಯಂತ ಲಾಕ್ಡೌನ್ ಇದ್ದು, ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಂಟೇನ್‍ಮೆಂಟ್ ಝೋನ್ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿಗಳನ್ನು ಮನೆ ಬಳಿಯೇ ಸಿಗುವಂತೆ ಅಗತ್ಯ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ಗೆ ತಿಳಿಸಿದ್ದಾರೆ. ಅಲ್ಲದೇ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸದರಿ ವ್ಯಕ್ತಿ ವಾಸದ ಮನೆ ಸೇರಿದಂತೆ ಸಂಪೂರ್ಣ ಕಂಟೇನ್‍ಮೆಂಟ್ ಝೋನ್ ಪ್ರದೇಶದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡುವಂತೆ ಹಾಗೂ ಇನ್ನಿತರ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ ಮೇಕಿನ ಅವರಿಗೆ ಸೂಚಿಸಿದರು.