ಕಲಬುರಗಿ: ಉಪ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗೆ ಪೈಪೋಟಿ ನೀಡುವ ಶಕ್ತಿ ನಮಗಿಲ್ಲ, ನಾಲ್ಕೈದು ಕ್ಷೇತ್ರಗಳಲ್ಲಿ ಮಾತ್ರ ಶಕ್ತಿ ಹಾಕಿ ಗೆಲುವು ಸಾಧಿಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ. ಈ ಮೂಲಕ ಜೆಡಿಎಸ್, ಬಿಜೆಪಿಗೆ ಪರೋಕ್ಷ ಬೆಂಬಲ ನೀಡಲಿದೆಯೇ ಎಂಬ ಪ್ರಶ್ನೆ ಇನ್ನೊಮ್ಮೆ ಉದ್ಭವಿಸಿದೆ.
ಕಲಬುರಗಿಯಲ್ಲಿ ಮಾತನಾಡಿ, ಉಪ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೆ ಅಭ್ಯರ್ಥಿ ಹಾಕೋದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ ಎಲ್ಲಾ ಕಡೆ ಪ್ರಬಲ ಶಕ್ತಿ ನಮಗಿಲ್ಲ, ಬೆಳಗಾವಿ ಹಾಗೂ ಹಳೆ ಮೈಸೂರು ಭಾಗದ ನಾಲ್ಕೈದು ಸೀಟುಗಳಿಗೆ ಪ್ರಬಲ ಪೈಪೋಟಿ ನೀಡಿ ಗೆಲುವಿಗೆ ಶ್ರಮಿಸುತ್ತೇವೆ. ಪಕ್ಷದ ಅಸ್ತಿತ್ವದ ದೃಷ್ಟಿಯಿಂದ ಉಳಿದ ಕಡೆಯೂ ಅಭ್ಯರ್ಥಿಗಳನ್ನು ಹಾಕುವುದಾಗಿ ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ದೊಡ್ಡ ಗೌಡರು, ಉಪ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಗೆಲ್ತೇವೆ ಎಂದು ಕಾಂಗ್ರೆಸ್ ಮುಖಂಡರು ಹೇಳ್ತಾರೆ.15 ಸೀಟು ಗೆದ್ದರೆ ನಾನು ಜನರ ಕ್ಷಮೆ ಕೇಳ್ತೇನೆ. ಬಿಜೆಪಿ ಪಕ್ಷದ ಕೆಲ ಅತೃಪ್ತರು ನಮ್ಮ ಪಕ್ಷದ ಮುಖಂಡರನ್ನು ಸಂಪರ್ಕಿಸಿದ್ದಾರೆ. ಆದರೆ ಪಕ್ಷದ ಸೇರ್ಪಡೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಮುಖಂಡರು ತೀರ್ಮಾನಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಉಪ ಚುನಾವಣೆಯಲ್ಲಿ ಸೋಲು-ಗೆಲುವು ಏನೇ ಆಗಲಿ, ಮತ್ತೊಮ್ಮೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಹೀಗಾಗಿ ಯಡಿಯೂರಪ್ಪ ಸೇಫ್ ಇರಲಿದ್ದಾರೆ. ಬಿಜೆಪಿಗೆ ಕಡಿಮೆ ಸೀಟು ಬಂದರೂ ಸರ್ಕಾರಕ್ಕೆ ಧಕ್ಕೆಯಾಗಲ್ಲ, ಮಧ್ಯಂತರ ಚುನಾವಣೆಯೂ ಬರಲ್ಲ. ಒಂದು ವೇಳೆ ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆ ಉಲ್ಬಣ ಆದ್ರೆ ಮಾತ್ರ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಹೇಳಿದರು.