ಕಲಬುರಗಿ: ಪ್ರತಿನಿತ್ಯ ಮಹಾರಾಷ್ಟ್ರದಿಂದ ಸಾವಿರಾರು ಜನರು ಕಲಬುರಗಿ ಜಿಲ್ಲೆಯ ಮೂಲಕ ಕರ್ನಾಟಕ ಪ್ರವೇಶ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, 72 ಗಂಟೆ ಒಳಗಾಗಿ ತಪಾಸಣೆ ಮಾಡಿಸಿಕೊಂಡ RTPCR ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಗಡಿಯೊಳಗೆ ಪ್ರವೇಶ ನೀಡಬೇಕು.
ಆದರೆ ಸರ್ಕಾರದ ನಿಯಮವನ್ನು ಚೆಕ್ ಪೋಸ್ಟ್ ಸಿಬ್ಬಂದಿ ಪಾಲಿಸುತ್ತಿಲ್ಲ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ, ಹಿರೋಳಿ ಚೆಕ್ಪೋಸ್ಟ್ಗಳಲ್ಲಿ ಸರಿಯಾಗಿ ತಪಾಸಣೆ ಮಾಡದೇ ಹಾಗೆಯೇ ಬಿಡಲಾಗ್ತಿದೆ. ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿದೆ. ಮಾಧ್ಯಮದ ಕ್ಯಾಮರಾ ಕಂಡಾಗ ಮಾತ್ರ ಸಿಬ್ಬಂದಿ ತಪಾಸಣೆ ನಾಟಕವಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಮತ್ತೊಂದೆಡೆ ಕಳ್ಳ ಮಾರ್ಗದ ಮೂಲಕ ಮಹಾರಾಷ್ಟ್ರದಿಂದ ಜನರು ಪ್ರವೇಶ ಪಡೆಯುತ್ತಿದ್ದಾರೆ. ಪೊಲೀಸರ ಮುಂದೆಯೇ ಕಳ್ಳ ಮಾರ್ಗದಲ್ಲಿ ಜನರು ಹೋಗುತ್ತಿದ್ದರೂ ನೋಡಿಯೂ ನೋಡದಂತೆ ಸಿಬ್ಬಂದಿ ಸುಮ್ಮನಿರುತ್ತಿದ್ದಾರೆ. ಹೀಗಾಗಿ ಮಹಾರಾಷ್ಟ್ರದಿಂದ ಬಂದವರಿಂದಲೇ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿದೆ ಅನ್ನೋದು ಹಲವರ ವಾದವಾಗಿದೆ.