ಕಲಬುರಗಿ: ಜಿಲ್ಲೆಯಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದು, ಇದಕ್ಕೆ ಸಾಂಕ್ರಾಮಿಕ ರೋಗ ಚಿಕನ್ ಪಾಕ್ಸ್ ಕಾರಣ ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ್ ಗ್ರಾಮದಲ್ಲಿ ಸ್ಟೇಷನ್ ಬಡಾವಣೆಯ ನಿವಾಸಿಗಳಾದ ಇಮ್ರಾನ್ ಪಟೇಲ್(16) ಹಾಗೂ ರೆಹಮಾನ್ ಪಟೇಲ್ (14) ಸಾವಿಗೀಡಾದ ಬಾಲಕರು.
ಹಾಪೀಸಾ ಬೇಗಂ ಎಂಬುವರ ನಾಲ್ವರು ಮಕ್ಕಳಲ್ಲಿ ಚಿಕನ್ ಪಾಕ್ಸ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಬೇಗಂ ತನ್ನ ಇಬ್ಬರು ಮಕ್ಕಳನ್ನು ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಚಿಕಿತ್ಸೆ ಫಲಿಸದೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಹಾಪೀಸಾ ಸೇರಿ ಇನ್ನಿಬ್ಬರು ಮಕ್ಕಳು ಸಹ ಚಿಕನ್ ಪಾಕ್ಸ್ ರೋಗದಿಂದ ಬಳಲುತ್ತಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ರಕ್ತದ ಮಾದರಿಯನ್ನು ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಇದೇ ಬಡಾವಣೆಯ ಮತ್ತಿಬ್ಬರಲ್ಲಿಯೂ ಸಹ ಚಿಕನ್ ಪಾಕ್ಸ್ ರೋಗದ ಲಕ್ಷಣಗಳು ಕಂಡುಬಂದಿರುವುದಾಗಿ ಚಿತ್ತಾಪುರ ಟಿಹೆಚ್ಓ ಅಮರ್ದೀಪ ತಿಳಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ