ಕಲಬುರಗಿ: ತೈಲ ದರಗಳು ಹೆಚ್ಚಾಗಿದ್ದರೂ ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಓದಿ: ಮನೆ ಮುಟ್ಟುಗೋಲಿಗೆ ಬಂದ ಬ್ಯಾಂಕ್ ಸಿಬ್ಬಂದಿ: ಆತಂಕಗೊಂಡು ಮನೆ ಮಾಲೀಕನ ಪತ್ನಿ ಆತ್ಮಹತ್ಯೆ
ನಗರದಲ್ಲಿಂದು ಮಾತನಾಡಿದ ಅವರು, ಬಸ್ ಪ್ರಯಾಣ ದರ ಹೆಚ್ಚಿಸುವಂತೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಪ್ರಸ್ತಾಪ ಬಂದಿದೆ. ಆದರೆ, ಕೊರೊನಾ ಹಾವಳಿ ಹಾಗೂ ನೈಸರ್ಗಿಕ ವಿಕೋಪಗಳಿಂದಾಗಿ ಸಾಮಾನ್ಯ ಜನರು ಈಗಾಗಲೇ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ.
ಹೀಗಿರುವಾಗ ಪ್ರಯಾಣ ದರ ಹೆಚ್ಚಳ ಮಾಡಿದರೆ ಶ್ರೀಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಲಿದೆ. ಸಿಎಂ ಅವರು ಸಹ ಬಸ್ ಪ್ರಯಾಣ ದರ ಏರಿಕೆ ಮಾಡದಿರಲು ಸೂಚಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಪ್ರಯಾಣ ದರ ಏರಿಕೆ ಇಲ್ಲ ಎಂದು ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇನ್ನು ಕಳೆದ ಬಾರಿಯ ಬಜೆಟ್‌ನಲ್ಲಿ ಸಾರಿಗೆ ಸಂಸ್ಥೆಯ ನಾಲ್ಕೂ ಘಟಕಗಳಿಗೆ ತಲಾ ಒಂದು ಸಾವಿರ ಹೊಸ ಬಸ್ ನೀಡುವುದಾಗಿ ಘೋಷಿಸಲಾಗಿತ್ತು. ಬದಲಾದ ಸನ್ನಿವೇಶದಲ್ಲಿ ಸರ್ಕಾರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದರಿಂದ ಅದು ಈಡೇರಲಿಲ್ಲ. ಈಗಾಗಲೇ ಶೇ 90 ರಷ್ಟು ಬಸ್‌ಗಳ ಓಡಾಟ ಆರಂಭವಾಗಿದೆ. ಏಪ್ರಿಲ್ ತಿಂಗಳ ಅಂತ್ಯಕ್ಕೆ ಮತ್ತೆ ಮೊದಲಿನ ಸ್ಥಿತಿಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ಈ ಬಾರಿಯ ಬಜೆಟ್‌ನಲ್ಲಿ ಈಶಾನ್ಯ, ವಾಯವ್ಯ ರಸ್ತೆ ಸಾರಿಗೆ ಸಾರಿಗೆ ಸಂಸ್ಥೆಗಳು ಹಾಗೂ ಕೆಎಸ್‌ಆರ್‌ಟಿಸಿಗೆ ತಲಾ ಒಂದು ಸಾವಿರ ಬಸ್ ನೀಡಲಾಗುವುದು ಎಂದರು.
ಹಳೆ ಬಸ್ ಹೊಸ ಪ್ಲ್ಯಾನ್:
ಹಳೆಯ ಬಸ್‌ಗಳನ್ನು ಗುಜರಿಗೆ ಹಾಕುವ ಬದಲು ಸ್ವಲ್ಪ ಸುಧಾರಣೆ ಮಾಡಿ, ಸಾಮಾಜಿಕ ಉದ್ದೇಶಗಳಿಗೆ ಬಳಸಿಕೊಳ್ಳುವ ಯೋಚನೆ ಮಾಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಈ ಬಸ್‌ಗಳನ್ನೇ ಶೌಚಾಲಯ, ಡೇ ಕೇರ್ ಸೆಂಟರ್, ಹಾಲುಣಿಸುವ ಮಹಿಳೆಯರ ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.