ಕಲಬುರಗಿ : ಎಸ್ಪಿಬಿ ಕೇವಲ ಸಂಗೀತಗಾರ ಮಾತ್ರವಲ್ಲ, ದೇಶಕಂಡ ಅತ್ಯಂತ ಸರಳ ಹಾಗೂ ಸೃಜನಶೀಲ ವ್ಯಕ್ತಿ. ತಮ್ಮ ಸರಳತೆಯ ಮೂಲಕವೇ ಎಲ್ಲರ ಮನೆ ಮಾತಾದವರು. ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡುಗಳಿಲ್ಲದೆ ಯಾವುದೇ ಸಮಾರಂಭಕ್ಕೆ ಕಳೆ ಬರಲು ಸಾಧ್ಯವಿಲ್ಲ ಎಂದು ಕಲಬುರಗಿ ಡಿಸಿ ವಿ.ವಿ. ಜ್ಯೋತ್ಸ್ನಾ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ, ಕೋವಿಡ್ ಸೇರಿದಂತೆ ಇನ್ನಿತರ ಅನಾರೋಗ್ಯದಿಂದ ಮೃತಪಟ್ಟ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಜ್ಯೋತ್ಸ್ನಾ, ಎಸ್ಪಿಬಿ ಹಾಡುಗಳ ಮೂಲಕ ದೇಶದ ಜನರ ಮನ ಗೆದ್ದವರು. ಅವರು ಕೇವಲ ಕನ್ನಡ ಭಾಷೆ ಮಾತ್ರವಲ್ಲದೆ 16 ಭಾಷೆಯಲ್ಲಿ, 40ಸಾವಿರಕ್ಕೂ ಅಧಿಕ ಹಾಡುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಎಸ್ಪಿಬಿ ಕೇವಲ ಮನರಂಜನೆಗೆ ಮಾತ್ರ ಹಾಡುಗಳನ್ನು ಹಾಡದೆ ಭಾವನಾತ್ಮಕವಾಗಿ ಸಂಗೀತಕ್ಕೆ ಜೀವ ತುಂಬಿದ ಮೇರು ಸಂಗೀತಗಾರ. ಎಂದು ಹೊಗಳಿದರು. ಈ ವೇಳೆ ಹಲವು ಸಂಗೀತ ಕಲಾವಿದರಿಂದ ಎಸ್ಪಿಬಿ ಗೀತೆಗಳ ಗಾಯನ ಮಾಡಿಸಲಾಯಿತು.
ಸಮಾರಂಭದಲ್ಲಿ ಚಿಂತಕ ಪತ್ರಿಕೆಯ ಸಂಪಾದಕಿ ಶೀಲಾ ತಿವಾರಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಸೇರಿದಂತೆ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.