ಕಲಬುರಗಿ: ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಅಫಜಲಪೂರ ತಾಲೂಕಿನ ಸೊನ್ನ ಬ್ರಿಡ್ಜ್ ಕಂ ಬ್ಯಾರೇಜ್ ಗೆ ಭೇಟಿ ನೀಡಿ ಭೀಮಾ ನದಿಗೆ ಮಹಾರಾಷ್ಟ್ರದಿಂದ ಬಿಡಲಾಗುತ್ತಿರುವ ನೀರಿನ ಪ್ರಮಾಣದ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮಹಾರಾಷ್ಟ್ರದ ಉಜನಿ ಮತ್ತು ವೀರಾ ಡ್ಯಾಮಿನಿಂದ ಸುಮಾರು 134400 ಲಕ್ಷ ಕ್ಯೂಸೆಕ್ಸ್ ನೀರು ಈಗಾಗಲೇ ಭೀಮಾನದಿಗೆ ಬಿಟ್ಟಿರುವುದರಿಂದ ಮಂಗಳವಾರ ಸೊನ್ನ ಬ್ಯಾರೇಜ್‍ಗೆ ನೀರು ತಲುಪುವ ಸಂಭವ ಇದೆ. 2017ರಲ್ಲಿ ಇಷ್ಟೇ ಪ್ರಮಾಣದ ನೀರು ಬಿಟ್ಟಾಗ ಭೀಮಾ ತೀರದ ಹಲವು ಪ್ರದೇಶಗಳು ತೊಂದರೆಗೀಡಾಗಿದ್ದು, ಇದು ಮರುಕಳಿಸುವ ಸಾಧ್ಯತೆ ಇದೆ. ಹೀಗಾಗಿ ನದಿ ತೀರದ ಬಾಧಿತ ಸ್ಥಳೀಯ ಜನರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಕ್ತ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಫಜಲಪೂರ ತಹಸೀಲ್ದಾರ ಮಧುರಾಜ ಕೂಡಲಗಿ ಅವರಿಗೆ ನಿರ್ದೇಶನ ನೀಡಿದರು.
ನದಿಗೆ ನೀರು ಹರಿಸುವ ಮುನ್ನ ಸಾರ್ವಜನಿಕರಿಗೆ ಗ್ರಾಮ ಮಟ್ಟದಲ್ಲಿ ಅಗತ್ಯ ಮಾಹಿತಿ ನೀಡಬೇಕು. ಸ್ಥಳೀಯ ಗ್ರಾಮ ಲೆಕ್ಕಿಗರು, ಪಿ.ಡಿ.ಓ. ಕೇಂದ್ರಸ್ಥಾನದಲ್ಲಿಯೆ ಇದ್ದು ನಿಗಾ ವಹಿಸಬೇಕು. ಕಳೆದ ಮೂರು ದಿನಗಳ ಹಿಂದೆ ವೀರಾ ಡ್ಯಾಮಿನಿಂದ 70000 ಸಾವಿರ ಕ್ಯೂಸೆಕ್ಸ್ ನೀರು, ಉಜ್ಜಯಿನಿ ಡ್ಯಾಮ್ ನಿಂದ ಸೋಮವಾರ ಮಧ್ಯಾಹ್ನ 64000 ಲಕ್ಷ ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಹರಿ ಬಿಡಲಾಗಿದ್ದು, ಈ ನೀರು ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸೊನ್ನ ಬ್ಯಾರೇಜ್ ತಲುಪಲಿವೆ.
ಸೊನ್ನ ಬ್ಯಾರೇಜ್‍ನಲ್ಲಿ 3.1 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ಪ್ರಸ್ತುತ 2 ಟಿಎಂಸಿ ನೀರು ಸಂಗ್ರಹವಾಗಿದೆ. 3 ಟಿ.ಎಂ.ಸಿ. ವರೆಗೆ ನೀರು ಸಂಗ್ರಹಣೆ ಮಾಡಿಕೊಂಡು ನಂತರ ಬರುವ ಒಳಹರಿವಿನ ಪ್ರಮಾಣದಷ್ಟೇ ನೀರನ್ನು 29 ಗೇಟ್ ಮೂಲಕ ಹೊರಬಿಡುವುದಾಗಿ ಭೀಮಾ ಏತ ನೀರಾವರಿ ಯೋಜನೆಯ ಎಇಇ ಲಕ್ಷ್ಮಿಕಾಂತ್ ಬಿರಾದಾರ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.