ಕಲಬುರಗಿ: ನಾನು ರಾಜಕೀಯಕ್ಕೆ ಬರುವ ಯೋಚನೆ ಸದ್ಯಕ್ಕೆ ಇಲ್ಲ. ಒಬ್ಬ ರಾಜಮನೆತನದ ಸದಸ್ಯರಾಗಿರುವುದೇ ಸಾಕು ಎಂದು ಯದುವೀರ್ ಒಡೆಯರ್ ಕಲಬುರಗಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಆಗಮಿಸಿದ ಅವರು, ಇತಿಹಾಸ ಪ್ರಸಿದ್ಧ ಬಹಮನಿ ಸುಲ್ತಾನರ ಕೋಟೆ, ಖ್ವಾಜಾ ಬಂದೇ ನವಾಜ್ ದರ್ಗಾ, ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಐವಾನ್ ಶಾಹಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಕಲಬುರಗಿ ಜಿಲ್ಲೆಗೆ ತಮ್ಮ ತಾತ ಜಯಚಾಮರಾಜೇಂದ್ರ ಒಡೆಯರ್ ಭೇಟಿ ನೀಡಿದ್ದರು. ತಾವು ಕಲಬುರಗಿ ಜಿಲ್ಲೆಗೆ ಬಂದಿರುವುದು ಇದೇ ಮೊದಲು ಎಂದರು.
ಮೈಸೂರು ಮಹಾಸಂಸ್ಥಾನಕ್ಕೆ ಎಲ್ಲಾ ಪಕ್ಷಗಳ ಮುಖಂಡರು ಸೌಜನ್ಯಯುತ ಭೇಟಿ ನೀಡುತ್ತಿರುತ್ತಾರೆ. ರಾಜಕೀಯ ಕ್ಷೇತ್ರದ ಹೊರತಾಗಿಯೂ ಸಮಾಜ ಸೇವೆಯನ್ನು ಮಾಡಬಹುದು. ರಾಜಕೀಯಕ್ಕೆ ಬಂದೇ ಸಮಾಜದ ಸೇವೆ ಮಾಡಬೇಕು ಅಂತೇನಿಲ್ಲ. ಈಗಾಗಲೇ ಮೈಸೂರು ಅರಮನೆ ಮೂಲಕ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಲಾಗುತ್ತಿದೆ. ರಾಜಕೀಯ ನಾಯಕರು ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ್ದಾರೆ. ಆದರೆ ನಾನು ರಾಜಕೀಯಕ್ಕೆ ಬರುವುದಿಲ್ಲ. ಮೈಸೂರಿನ ರಾಜಮನೆತನದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೊಗುವುದಷ್ಟೇ ನಮ್ಮ ಕೆಲಸ ಎಂದರು.
ಮೊದಲು ರಾಜ್ಯವನ್ನು ರಾಜರು ಆಳುತ್ತಿದ್ದರು. ಆದರೆ ಈಗ ಬದಲಾದ ಪರಸ್ಥಿತಿಯಲ್ಲಿ ರಾಜಕೀಯ ಪ್ರತಿನಿಧಿಗಳು ರಾಜ್ಯವನ್ನಾಳುತ್ತಿದ್ದು, ಪ್ರಜಾಪ್ರಭುತ್ವದ ವ್ಯವಸ್ಥೆ ಜಾರಿಯಲ್ಲಿದೆ. ರಾಜಮನೆತನಗಳು ಅಳಿವಿನ ಅಂಚಿನಲ್ಲಿವೆ ಎಂದು ಕಳವಳ ವ್ಯಕ್ತಪಡಿಸಿದರು. ತಮಗೆ ಪ್ರವಾಸೋದ್ಯಮ ಇಲಾಖೆಯ ರಾಯಭಾರಿಯನ್ನಾಗಿ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾನು ರಾಯಭಾರಿ ಆಗಿದ್ದೇ ಆದ್ರೆ ಕಲಬುರಗಿ ಭಾಗದ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಬಳಿಕ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಚಿಕ್ಕವೀರೇಶ್ವರ ಶಿವಾಚಾರ್ಯರ 72 ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಠದ ಪೀಠಾಧೀಪತಿಗಳಾದ ಶ್ರೀ ರೇವಣಸಿದ್ದ ಶಿವಾಚಾರ್ಯರು ಸೇರಿ ಅನೇಕ ಮಠಾಧೀಶರು ಉಪಸ್ಥಿತರಿದ್ದರು.