ಕಲಬುರಗಿ: ಡ್ರಗ್ಸ್ ಜಾಲಕ್ಕೆ ಸಿನಿಮಾ ನಟರು, ರಾಜಕಾರಣಿಗಳ ಮಕ್ಕಳು ಮಾತ್ರವಲ್ಲ ರಾಜ್ಯದಾದ್ಯಂತ ಯುವ ಸಮುದಾಯ ಬಲಿಯಾಗುತ್ತಿದೆ ಎಂಬ ಆರೋಪವಿದೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ. ತಪ್ಪಿತಸ್ಥರು ಯಾರೇ ಆದರೂ ಕಠಿಣ ಕ್ರಮ ತೆಗೆದುಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿನಿಮಾ ನಟರಿರಲಿ, ರಾಜಕಾರಣಿಗಳಿರಲಿ. ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಖಚಿತ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಇದೇ ವೇಳೆ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ವಿಚಾರವಾಗಿ ಮಾತನಾಡಿದ ಅವರು, ವಿಜಯೇಂದ್ರ ಆರೋಗ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ವೈದ್ಯರು ಅವರ ಬಳಿ ಹೋಗಿ ತಮ್ಮ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ಆರೋಗ್ಯ ಇಲಾಖೆ ಮಾತ್ರವಲ್ಲ. ಬೇರೆ ಯಾವುದೇ ಇಲಾಖೆಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿಲ್ಲ. ಪಕ್ಷದ ಯುವ ಮುಖಂಡರಾಗಿ ಸಿಎಂ ಪುತ್ರ ಅನ್ನೋ ಕಾರಣಕ್ಕಾಗಿ ಆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ ಅಷ್ಟೇ. ವೈದ್ಯರು ಕೆಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ. ಮುಷ್ಕರಕ್ಕೂ ಮುಂದಾಗಿದ್ದರು. ಆದರೆ, ಈಗಾಗಲೇ ಅವರನ್ನ ಕರೆಸಿ ಮಾತನಾಡಲಾಗಿದೆ. ಹೀಗಾಗಿ ವೈದ್ಯರು ಮುಷ್ಕರಕ್ಕೆ ಮುಂದಾಗುವುದಿಲ್ಲ ಅನ್ನೋ ಭರವಸೆ ಇದೆ. ವೈದ್ಯರ ಬೇಡಿಕೆಗಳನ್ನು ಇಷ್ಟರಲ್ಲೇ ಈಡೇರಿಸಿ, ಅವರಿಗೆ ಶೀಘ್ರವೇ ಸಿಹಿ ಸುದ್ದಿ ಕೊಡುತ್ತೇವೆ ಎಂದರು.
ಇನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಅಧಿಕ ಹಣ ವಸೂಲಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸೋಂಕಿತರಲ್ಲಿ ಅಧಿಕ ಹಣ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಅಂತಹ ಖಾಸಗಿ ಆಸ್ಪತ್ರೆಯ ಮಾನ್ಯತೆ ರದ್ದುಗೊಳಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದರು.