ಕಲಬುರಗಿ: ಕೊರೊನಾ ವೈರಸ್ ಸೋಂಕಿನಿಂದ ಕಲಬುರಗಿಯಲ್ಲಿ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆ ಆರೋಗ್ಯ ಸಚಿವ ಶ್ರೀರಾಮುಲು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್, ಜಿಲ್ಲಾ ಪಂಚಾಯತ್ ಸಿಇಓ ಪಿ. ರಾಜಾ, ಪೊಲೀಸ್ ಕಮಿಷನರ್ ಎಂ. ಎನ್. ನಾಗರಾಜ ಹಾಗೂ ಮಹಾನಗರ ಪಾಲಿಕೆಯ ಕಮಿಷನರ್, ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಚಿಂಚೋಳಿ ಶಾಸಕ ಅವಿನಾಶ ಜಾಧವ, ಸೇರಿದಂತೆ ಇತರೆ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು, ಕಾರ್ಯವೈಖರಿಗಳ ಬಗ್ಗೆ ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಕಲೆ ಹಾಕಿದರು. ಈ ಕುರಿತ ಮುಂದಿನ ನಡೆಯ ಬಗ್ಗೆ ಚರ್ಚಿಸಿದರು.
ನಾಲ್ವರು ಕೊರೊನಾ ಶಂಕಿತರಲ್ಲಿ ಮೂವರ ಬಗ್ಗೆ ಚಿಂತೆಯಿಲ್ಲ:
ಕೊರೊನಾ ಸೊಂಕು ತಗುಲಿ ಮೃತಪಟ್ಟ ವೃದ್ಧನ ಕುಟುಂಬಸ್ಥರಲ್ಲಿ ಸೋಂಕಿನ ಶಂಕೆ ವ್ಯಕ್ತವಾದ ಹಿನ್ನೆಲೆ ಕುಟುಂಬದ ನಾಲ್ವರ ಗಂಟಲು ದ್ರವ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿತ್ತು. ಇದೀಗ ನಾಲ್ವರಲ್ಲಿ ಮೂವರ ವರದಿ ಬಂದಿದ್ದು ನೆಗೆಟಿವ್ ಬಂದಿದೆ. ಇನ್ನೊಬ್ಬರ ವರದಿ ನಾಳೆ ಲಭ್ಯವಾಗಲಿದೆ.