ಕಲಬುರಗಿ : ರಾಜ್ಯದಲ್ಲಿ ಕೊರೊನಾಕ್ಕೆ ಮೊದಲ ಬಲಿ ಪಡೆದು ಇಡೀ ದೇಶದಲ್ಲಿಯೇ ಆತಂಕ ಸೃಷ್ಟಿಸಿದ್ದ ಕಲಬುರಗಿಯಲ್ಲೀಗ 2ನೇ ಅಲೆಯ ಅರ್ಭಟ ಆರಂಭವಾಗಿದೆ. ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕಲಬುರಗಿ ಜಿಲ್ಲೆಯ ಮೇಲೆ ಇದು ಪ್ರಭಾವ ಬೀರುತ್ತಿದೆ.
ನಿತ್ಯ 8 ರಿಂದ 10 ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋಂಕು ಈಗ ಸರಿ ಸುಮಾರು 40 ರಿಂದ 50 ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಇಷ್ಟಾದರೂ ಕಲಬುರಗಿ ಜನತೆ ಗಂಭೀರವಾಗಿ ತೆಗೆದುಕೊಂಡಿಲ್ಲ. ಬಹುತೇಖಕರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಿಲ್ಲ. ಮಾಸ್ಕ್ ಹಾಕದೆ, ದೈಹಿಕ ಅಂತರ ಕಾಪಾಡಿಕೊಳ್ಳದೆ ಓಡಾಡುವುದು ಎಲ್ಲೆಡೆ ಕಂಡು ಬರುತ್ತಿದೆ.
ಸ್ವತಃ ಜಿಲ್ಲಾಧಿಕಾರಿಗಳು ರಸ್ತೆಗೆ ಇಳಿದಿದ್ದು, ಮಾಸ್ಕ್ ಧರಿಸದವರಿಗೆ ದಂಡ ಹಾಕಿ ಉಚಿತ ಮಾಸ್ಕ್ ನೀಡಿ ಜಾಗೃತಿ ಮೂಡಿಸಿದ್ದಾರೆ. ಅಧಿಕಾರಿಗಳು ಕಣ್ಮುಂದೆ ಕಂಡಾಗ ಮಾಸ್ಕ್ ಧರಿಸುವ ಜನತೆ ಮುಂದೆ ಹೋಗಿ ಮಾಸ್ಕ್ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ.
ಮಹಾರಾಷ್ಟ್ರ ಗಡಿ ಹಂಚಿಕೊಂಡಿರುವುದೇ ಜಿಲ್ಲೆಯಲ್ಲಿ ಸೋಂಕು ಹೆಚ್ಚಲು ಮುಖ್ಯ ಕಾರಣ. ಅಲ್ಲದೆ ಮುಂಬೈಗೆ ಹೋಗಿ ಬರುವವರ ಸಂಖ್ಯೆಯೂ ಇಲ್ಲಿ ಅಧಿಕ. ಹೀಗಾಗಿ, ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮಹಾ ಗಡಿಗೆ ಅಂಟಿರುವ ಅಫಜಲ್ಪುರ, ಆಳಂದದಲ್ಲಿ ಚೆಕ್‌ಪೋಸ್ಟ್ ಆರಂಭಿಸಿ ನಿಗಾ ಇಡಲಾಗಿದೆ. ಆದರೂ ಅಡ್ಡ ದಾರಿಗಳಲ್ಲಿ ಜಿಲ್ಲೆ ಪ್ರವೇಶಿಸುತ್ತಿರುವವರ ಮೇಲೆ ಸಂಪೂರ್ಣ ನಿಯಂತ್ರಣ ಹೇರಲು ಸಾಧ್ಯವಾಗಿಲ್ಲ.
ಹೀಗಾಗಿ, ಸೋಂಕು ಹೆಚ್ಚುತ್ತಲೇ ಸಾಗಿದೆ. ಫೆ.25ಕ್ಕೆ ಜಿಲ್ಲೆಯಲ್ಲಿ ಸೋಂಕಿನಿಂದ 330 ಜನರ ಸಾವು ಸಂಭವಿಸಿ ಸರಣಿ ಅಲ್ಲಿಗೆ ಸ್ಥಗಿತಗೊಂಡಿತ್ತು. ಆದರೆ, ಇದೀಗ ಮಾ.12ಕ್ಕೆ ಶಹಾಬಾದ್‌ನಲ್ಲಿ, ಮಾ. 16 ಕ್ಕೆ ಕಲಬುರಗಿಯ ಶಹಾಬಜಾರ್‌ನಲ್ಲಿ ಸಾವು ಸಂಭವಿಸಿ ಸಾವಿನ ಸರಣಿ ಮತ್ತೆ ಆರಂಭವಾಗಿದೆ.
ಕೊರೊನಾಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಕಠಿಣ ನಿಯಮಾಳಿಗಳ ಜಾರಿಗೆ ಮುಂದಾಗಿದೆ. 5ಕ್ಕಿಂತ ಹೆಚ್ಚು ಸೋಂಕಿತರು ಕಂಡು ಬಂದಲ್ಲಿ ಅಂತಹ ಪ್ರದೇಶವನ್ನು ಮೈಕ್ರೋ ಕಂಟೆಂಟ್ ಝೋನ್ ಎಂದು ಘೋಷಣೆ ಮಾಡಲಾಗುತ್ತಿದೆ. ತಾರಫೈಲ್, ವಿಜಯ ನಗರ, ಎಂಬಿ ನಗರ, ಗಾಜಿಪುರ, ಮೆಕ್ಕಾ ಕಾಲೋನಿ, ಹನುಮಾನ್ ನಗರ, ಸೂಪರ್ ಮಾರ್ಕೆಟ್ ಪ್ರದೇಶ, ಶಹಾಬಜಾರ್‌ಗಳಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದೆ.
ಕೋವಿಡ್ 2ನೇ ಅಲೆ ಆರಂಭದಲ್ಲಿಯೇ ಹತೋಟಿಗೆ ತರಲು ಜಿಲ್ಲಾಡಳಿತ ಸರ್ವ ಪ್ರಯತ್ನ ನಡೆಸುತ್ತಿದೆ. ನಿತ್ಯ 3 ಸಾವಿರಕ್ಕೂ ಹೆಚ್ಚು ಕೋವಿಡ್ ಪರೀಕ್ಷೆ ನಡೆಸುತ್ತಿದೆ. ಜಿಲ್ಲಾಡಳಿತದೊಂದಿಗೆ ಜನ ಕೂಡ ಕೈ ಜೋಡಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಿದರೆ ಸೋಂಕು ಹರಡುವಿಕೆ ತಡೆಯಬಹುದಾಗಿದೆ.