ಕಲಬುರ್ಗಿ : ಕೊರೊನಾ ಭೀತಿಯಲ್ಲಿದ್ದ ಜಿಲ್ಲೆಯ ಜನರಿಗೆ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ಕೊರೊನಾ ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖರಾಗಿ ಇಎಸ್‌ಐ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದೇ ಮಾರ್ಚ್ 10 ರಂದು ವೃದ್ಧ ಮಹ್ಮದ್ ಸಿದ್ದಿಕಿ ಕೊರೊನಾ ಸೋಂಕಿನಿಂದ ಮೃತ ಪಟ್ಟಿದ್ದರು. ಈತನಿಗೆ ಉಪಚಾರ ಮಾಡಿದ್ದ ಮಗಳು ಸೇರಿ ಮೃತನ ಕುಟುಂಬದ ನಾಲ್ವರನ್ನೂ ಇಎಸ್‌ಐ ಆಸ್ಪತ್ರೆಯ ಐಸೋಲೇಷನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಅಲ್ಲದೆ ಅವರ ಗಂಟಲು ದ್ರವ ಸ್ಯಾಂಪಲ್ ಪರೀಕ್ಷೆಗೊಳಪಡಿಸಿದಾಗ, ಮೃತನ ಮಗಳು 45 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಕಾರಣಕ್ಕೆ ಮಹಿಳೆಯನ್ನು ಇಎಸ್ಐ ಆಸ್ಪತ್ರೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗಿತ್ತು. 14 ದಿನಗಳ ನಂತರ ದ್ರವದ ಸ್ಯಾಂಪಲ್ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬಂದಿದೆ. ನಿಯಮದಂತೆ ಮತ್ತೆ 24 ತಾಸುಗಳ ಬಳಿಕ ನಡೆಸಿದ ಸ್ಯಾಂಪಲ್ ಪರೀಕ್ಷೆ ವರದಿಯೂ ನೆಗೆಟಿವ್ ಬಂದಿದೆ. ಈ ಹಿನ್ನೆಲೆ ಮಹಿಳೆ ಹಾಗೂ ಇದೇ ಆಸ್ಪತ್ರೆಯ ಐಸೋಲೇಷನ್‌ನಲ್ಲಿದ್ದ ಆಕೆಯ ಪತಿಯನ್ನೂ ಡಿಸ್ಚಾರ್ಜ್ ಮಾಡಲಾಗಿದೆ.
ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನ ಗಂಟಲು ದ್ರವದ ಸ್ಯಾಂಪಲ್ ಪರಿಕ್ಷೆಗೆ ಕಳುಹಿಸಲಾಗಿದೆ. ವರದಿ ನಾಳೆ ಬರೋ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಮೃತ ವೃದ್ಧ ಸೇರಿ ಮೂವರಲ್ಲಿ ಮಾತ್ರ ಪಾಸಿಟಿವ್ ಕಂಡು ಬಂದಿತ್ತು. ವೃದ್ಧ ಮೃತಪಟ್ಟಿದ್ದರೆ ಮಹಿಳೆ ಗುಣಮುಖರಾಗಿದ್ದಾರೆ. ಈಗ ಜಿಲ್ಲೆಯಲ್ಲಿ ಕೇವಲ ಒಂದು ಪಾಸಿಟಿವ್ ಪ್ರಕರಣ ಉಳಿದಂತಾಗಿದೆ. ಇದು ಜಿಲ್ಲೆಯ ಜನ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ.