ಕಲಬುರಗಿ : ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಹೇಳಿಕೆ ಖಂಡನಾರ್ಹ. ಈ ಹೇಳಿಕೆಯಿಂದ ಶೇ.10 ರಷ್ಟು ಮತಗಳು ಕಾಂಗ್ರೆಸ್ ಕೈಬಿಡಲಿವೆ. ಮೇ. 10 ರಂದು ಮತದಾರರೇ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕಮಲಾಪುರ ಪಟ್ಟಣದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಅಮೆರಿಕದಂತ ಪ್ರಗತಿಶೀಲ ದೇಶ ಆರ್ಥಿಕ ಕಷ್ಟ ಎದುರಿಸುವ ದಿನಮಾನದಲ್ಲಿ ದೇಶದ ಆರ್ಥಿಕ ಸುಧಾರಣೆ ತಂದಿದ್ದಾರೆ. ವಿಶ್ರಾಂತಿ ಪಡೆಯದೇ ಮೋದಿ ಅವರು ದೇಶದ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ. ಇಂತಹವರನ್ನು ವಿಷ ಸರ್ಪಕ್ಕೆ ಹೋಲಿಸಿರುವ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡನಾರ್ಹ. ಇವರ ಹೇಳಿಕೆಯಿಂದ ಜನ ಕೆರಳಿದ್ದಾರೆ. ಮೇ 10 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ : ಜಾತಿ ಹೆಸರಿನಲ್ಲಿ ವಿಷ ಬಿಜ ಬಿತ್ತಿ, ಹಣ ಹೆಂಡ, ತೋಳ್ಬಲ, ಅಧಿಕಾರ ಬಲದಿಂದ ಕಾಂಗ್ರೆಸ್ ಗೆಲ್ಲುವ ಕಾಲ ಮುಗಿದಿದೆ. ಒಬ್ಬ ಗ್ರಾಮ ಪಂಚಾಯತ್ ಅಧ್ಯಕ್ಷ ಕೂಡಾ ರಾಜೀನಾಮೆ ನೀಡಲಾರದ ದಿನಗಳಲ್ಲಿ ಸಿಎಂ ಹುದ್ದೆಗೆ ನಾನು ರಾಜೀನಾಮೆ ನೀಡಿದ್ದೇನೆ. ಆದರೂ ರಾಜ್ಯದಲ್ಲಿ ತಿರುಗಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. ಮೋದಿ ಬಂದು ಹೋದ ಮೇಲೆ ಮತ್ತಷ್ಟು ಗಾಳಿ ಬೀಸಲಿದೆ. 140 ಸೀಟು ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ ಎಂದು ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಇಲ್ಲಸಲ್ಲದ ಮಾತನ್ನು ಆಡುತ್ತಿದೆ : ಹೆಣ್ಣು ಮಗಳು ಜನಿಸಿದ ಕುಟುಂಬದಲ್ಲಿ ಅಳುವ ಪರಿಸ್ಥಿತಿ ಇತ್ತು. ಅದನ್ನು ಮನಗಂಡು ನಾನು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದೇನೆ. ಕಿಸಾನ್ ಸನ್ಮಾನ ಯೋಜನೆಯಲ್ಲಿ ಕೇಂದ್ರದ ₹6 ಸಾವಿರ ಜೊತೆ ರಾಜ್ಯದಿಂದ ₹4 ಸಾವಿರ ಸೇರಿಸಿ ರೈತರಿಗೆ ಕೊಟ್ಟಿದ್ದೇನೆ. ರೈತರ ಸಾಲ ಮನ್ನಾ, ಉಚಿತ ವಿದ್ಯುತ್, ರೈತರಿಗೆ ಪ್ರತ್ಯೇಕ ಬಜೆಟ್ ಮಂಡನೆ ನೀಡಿ ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದೇನೆ. ಬಡ್ಡಿ ರಹಿತ ರೈತರಿಗೆ ಸಾಲ ಕೊಡುವ ಪದ್ಧತಿ ಪರಿಚಯಿಸಿದ್ದೇನೆ. ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಇಷ್ಟೊಂದು ಜನ ಪರ ಯೋಜನೆಗಳನ್ನು ಕೊಟ್ಟಿರುವ ಬಿಜೆಪಿ ಬಗ್ಗೆ ಕಾಂಗ್ರೆಸ್ನವರು ಇಲ್ಲ ಸಲ್ಲದ ಮಾತನ್ನು ಆಡುತ್ತಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಸವರಾಜ್ ಮತ್ತಿಮಡು ವಿರುದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರೇವು ನಾಯಕ ಬೆಳಮಗಿ ಒಬ್ಬ ಮೋಸಗಾರ. ನಾಲ್ಕು ಬಾರಿ ಬಿಜೆಪಿ ಟಿಕೆಟ್ ಕೊಟ್ಟು ಎಂಎಲ್‌ಎ ಮಾಡಿದ್ದೇನೆ. ಎರಡು ಬಾರಿ ಮಂತ್ರಿ ಮಾಡಿದ್ದೇನೆ ಆದರೂ ದ್ರೋಹ ಬಗೆದಿದ್ದಾರೆ. ಇವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. 25 ಸಾವಿರಕ್ಕಿಂತ ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಬಸವರಾಜ್ ಮತ್ತಿಮಡು ಅವರನ್ನು ಗೆಲ್ಲಿಸುವ ಮೂಲಕ ರೇವು ನಾಯಕ್ ಬೆಳಮಗಿ ಠೇವಣಿ ಕಳೆದುಕೊಳ್ಳುವಂತೆ ಮಾಡಬೇಕೆಂದು ಬಿಎಸ್ ಯಡಿಯೂರಪ್ಪ ಕರೆ ನೀಡಿದರು.
ಇದನ್ನೂ ಓದಿ : ಸೋನಿಯಾ ಗಾಂಧಿ ವಿಷಕನ್ಯೆ ಏನು?... ಖರ್ಗೆ ಹೇಳಿಕೆ ಬಗ್ಗೆ ಯತ್ನಾಳ್ ಪ್ರಶ್ನೆ