ಕಲಬುರಗಿ: ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಲಬುರಗಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಮೇಲೆ ಹಾಸಿಗೆ ಹಾಕಿಕೊಂಡು ಮಲಗಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಮುಂದಾಳತ್ವದಲ್ಲಿ ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಜಗತ್ ವೃತ್ತದ ರಸ್ತೆಯ ಮೇಲೆ ಬೆಡ್ ಹಾಕಿಕೊಂಡು ಮಲಗಿ ವಿನೂತನವಾಗಿ ಪ್ರತಿಭಟಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಜಿಲ್ಲೆಯಲ್ಲಿ ಬೆಡ್ ಸಿಗದೆ ಜನ ಸಾಯುತ್ತಿದ್ದಾರೆ. ಸರ್ಕಾರ ಹಾಗೂ ಸ್ಥಳೀಯ ಬಿಜೆಪಿ ನಾಯಕರು ಕಾಂಗ್ರೆಸ್ ನೀಡಿರುವ ಬೆಡ್ ಎಂದು ಸ್ವೀಕಾರ ಮಾಡಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಮಗೆ ಕ್ರೆಡಿಟ್ ಬೇಕಾಗಿಲ್ಲ. ಬೇಕಾದರೆ ಬೆಡ್ ಮೇಲೆ ಮೋದಿ ಹಾಗೂ ಯಡಿಯೂರಪ್ಪ ಅವರ ಫೋಟೋ ಹಾಕಿ ಕೊಡುತ್ತೇವೆ. ಅಷ್ಟು ಸಾಕಾಗಲ್ಲಿಲ್ಲ ಎಂದರೆ ಬೆಡ್ ಸಂಪೂರ್ಣ ಕೇಸರಿಮಯವಾಗಿಸಿ ಕೊಡಲೂ ತಯಾರಿದ್ದೇವೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜಕೀಯ ಮಾಡಬೇಡಿ. ಇದರಿಂದ ಕಲಬುರಗಿ ಭಾಗದ ಜನ ಸಂಕಷ್ಟ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಮೊಂಡುತನ ಪ್ರದರ್ಶಿಸುತ್ತಿರುವ ಸರ್ಕಾರ ಕೂಡಲೆ ಕೋವಿಡ್ ನಿಯಂತ್ರಣದ ಕಡೆ ಗಮನಹರಿಸಿ ಸಮರ್ಪಕ ಚಿಕಿತ್ಸೆ ಕೊಡಿಸಲು ಮುಂದಾಗಬೇಕೆಂದು ಆಗ್ರಹಿಸಿದರು.