ಕಲಬುರಗಿ: ಚಿಂಚೋಳಿ ಉಪಚುನಾವಣೆ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ್ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಮೇ 04 ರಂದು ಚಿಂಚೋಳಿಯ ಸೋನಾಲಗಿರಿ ಪಂಗರಗ ಗ್ರಾಮದಲ್ಲಿ ಶ್ರೀ ಪರ್ವತಲಿಂಗ ಪರಮೇಶ್ವರ ಮಾಹಾರಾಜರ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಹೆಸರಲ್ಲಿ ಪರವಾನಗಿ ಪಡೆಯದೆ ಬಿಜೆಪಿಯಿಂದ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸಂಸದ ಭಗವಂತ ಖೂಬಾ, ಉಮೇಶ ಜಾಧವ್, ಶಾಸಕ ಅಶ್ವತ್ಥ್ ನಾರಾಯಣ ಮತ್ತಿತರರು ಭಾಗಿಯಾಗಿದ್ದರು.
ಸೋನಾಲಗಿರಿ ಮಠವನ್ನು ರಾಜಕೀಯಕ್ಕೆ ಬಳಸಿಕೊಂಡು ಬಂಜಾರ ಸಮುದಾಯದ ಮತದಾರರನ್ನು ಓಲೈಸಲಾಗುತ್ತಿದೆ. ಮಠದ ಗುರುಗಳು ದುಡ್ಡಿನ ಆಮಿಷಕ್ಕೆ ಒಳಗಾಗಿ ಮಠಕ್ಕೆ ಬಂದ ಭಕ್ತರಿಗೆ ಬಿಜೆಪಿಗೆ ಮತ ಹಾಕುವಂತೆ ಆಮಿಷ ನೀಡುತ್ತಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಲು ಕಾಂಗ್ರೆಸ್ ಮುಖಂಡ ಶರಣು ಪಾಟೀಲ್ ಮೋತಕಪಲ್ಲಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.