ಕಲಬುರಗಿ: ಮಹಾನಗರ ಪಾಲಿಕೆಯ 55 ವಾರ್ಡ್‍ಗಳಿಗೆ 2021ರ ಸೆಪ್ಟಂಬರ್ 3 ರಂದು ಚುನಾವಣೆ ನಡೆಯಲಿದ್ದು, ಇದೇ ಆಗಸ್ಟ್ 16 ರಿಂದ ಸೆಪ್ಟೆಂಬರ್ 6ರ ವರೆಗೆ ನಗರದಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಪ್ರಕ್ರಿಯೆ ಸೆಪ್ಟೆಂಬರ್ 3ರ ಬೆಳೆಗ್ಗೆ 7 ಗಂಟೆಯಿಂದ ಸಾಯಂಕಾಲ 5ಗಂಟೆವರೆಗೂ ನಡೆಯಲಿದೆ. ಮರು ಮತದಾನ ಅವಶ್ಯಕವಿದ್ದಲ್ಲಿ ಸೆ.5 ರಂದು ನಡೆಸಲಾಗುವುದು. ಮತ ಎಣಿಕೆ ಸೆಪ್ಟೆಂಬರ್ 6ನೇ ತಾರೀಖು ಬೆಳೆಗ್ಗೆ 8 ರಿಂದ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 16 ರಿಂದ ಆರಂಭವಾಗಲಿದೆ. ಆಗಸ್ಟ್ 23 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಉಮೇದುವಾರಿಕೆ ಸಲ್ಲಿಸುವವರು ತಮ್ಮ ತಮ್ಮ ವಾರ್ಡ್‍ಗಳಲ್ಲಿ ನೇಮಿಸಿರುವ 11 ಚುನಾವಣಾಧಿಕಾರಿಗಳಿಗೆ ಬೆಳೆಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಲ್ಲಿಸಬೇಕು. ನಾಮಪತ್ರ ಸಲ್ಲಿಸುವ ಅಭ್ಯರ್ಥಿಯನ್ನು ಒಳಗೊಂಡಂತೆ ಒಟ್ಟು 5 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, 100 ಮೀಟರ್ ಸುತ್ತಳತೆಯಲ್ಲಿ 2 ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಉಮೇದುವಾರಿಕೆ ಸಲ್ಲಿಸುವ ಅಭ್ಯರ್ಥಿಗಳು ಠೇವಣಿ ಸಂದಾಯ ಮಾಡಿದ ರಶೀದಿ, ಯಾವುದಾದರೂ ಪಕ್ಷದಿಂದ ಮಾನ್ಯತೆ ಪಡೆದಿದ್ದರೆ ನಮೂನೆ (ಬಿ), ಮಾನ್ಯತೆ ಪಡೆಯದೇ ಇರುವ ಹುರಿಯಾಳುಗಳು ಸಹ ನಮೂನೆ (ಬಿ), ಪ್ರಮಾಣ ಪತ್ರ, ಘೋಷಣಾ ಪತ್ರ ಹಾಗೂ ಇತ್ತೀಚಿನ ಭಾವಚಿತ್ರಗಳನ್ನು ಸಲ್ಲಿಸಬೇಕು. ಆಗಸ್ಟ್ 24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆಗಸ್ಟ್ 26 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ಮತಎಣಿಕೆ ನಂತರ ಸೆಪ್ಟೆಂಬರ್ 6ರಂದು ನಗರದಲ್ಲಿ ಹೇರಲಾಗಿದ್ದ ನೀತಿ-ಸಂಹಿತೆಯನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.
ನಗರದ 55 ವಾರ್ಡ್‍ಗಳಿಗೆ ನಡೆಯುವ ಚುನಾವಣೆಗೆ 533 ಮತದಾನದ ಕೇಂದ್ರಗಳನ್ನು ತೆರೆಯಲಾಗುತ್ತದೆ. ಅದರಲ್ಲಿ 471 ಮುಖ್ಯ ಮತದಾನ ಕೇಂದ್ರ ಹಾಗೂ 62 ಸಾಮಾನ್ಯ ಮತದಾನ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟು 5,19,464 ಮತದಾರಿದ್ದು, ಅದರಲ್ಲಿ ಪುರುಷರು 2,58,775, ಮಹಿಳೆಯರು 2,60,543 ಹಾಗೂ ಇತರೆ 146 ಮತದಾರರಿದ್ದಾರೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತ ಕೇಂದ್ರಗಳ ಪಟ್ಟಿಯನ್ನು ಶೀಘ್ರದಲ್ಲಿಯೇ ಸಿದ್ದಪಡಿಸಲಾಗುವುದು. ಯಾರಾದರೂ ಕಾನೂನು ನಿಯಮ ಉಲ್ಲಂಘನೆ ಮಾಡಿದಲ್ಲಿ ಅಂತವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದರು.
ಚುನಾವಣೆ ಸಂದರ್ಭದಲ್ಲಿ ಕೋವಿಡ್-19ನ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಎಲ್ಲರೂ ಗಮನದಲ್ಲಿಟ್ಟುಕೊಂಡು ಮಾಸ್ಕ್ ಬಳಸುವಿಕೆ, ಸ್ಯಾನಿಟೈಸರ್ ಬಳಕೆ, ದೈಹಿಕ ಅಂತರ ಕಾಪಾಡಿಕೊಳ್ಳುವುದು ಅವಶ್ಯಕ ಎಂದು ಅವರು ತಿಳಿಸಿದರು.