ಕಲಬುರಗಿ: ನೆರೆಪೀಡಿತ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಬಿಜೆಪಿ ಎಂಎಲ್ಸಿಯನ್ನು ಸಹ ವಿಮಾನ ನಿಲ್ದಾಣದ ಒಳಗೆ ಬಿಡದಿದ್ದಕ್ಕೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಸಿಎಂ ಯಡಿಯೂರಪ್ಪ ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಆದ್ರೆ ವಿಮಾನ ನಿಲ್ದಾಣಕ್ಕೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿದೆ. ವಿಮಾನ ನಿಲ್ದಾಣದ ಮೇನ್ ಗೇಟ್ ಹೊರಗಡೆಯೇ ಮಾಧ್ಯಮದವರು ನಿಲ್ಲುವಂತಾಗಿದೆ. ಸರ್ಕಾರದ ಆದೇಶ ಇರೋದ್ರಿಂದ ಒಳಗೆ ಬಿಡಲ್ಲ ಎಂದು ಪೊಲೀಸರು ತಡೆ ಹಿಡಿದಿದ್ದಾರೆ. ಈ ವೇಳೆ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನೂ ಹೇಗೆ ಬಿಡುವುದಿಲ್ಲ ಎಂದು ಕಾರ್ಯಕರ್ತರು ಪೊಲೀಸರ ವಿರುದ್ಧ ಕಿಡಿಕಾರಿದರು.
ಕಲಬುರಗಿಗೆ ಜಿಲ್ಲಾ ಉಸ್ತುವಾರಿ ಸಚಿವರು ಬಾರದೆ ಇರೋದ್ರಿಂದ ಅಧಿಕಾರಿಗಳು ಹೀಗೆ ವರ್ತಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಧಿಕಾರಿಗಳ ದರ್ಬಾರ್ ನಡೆದಿದೆ. ಜನಪ್ರತಿನಿಧಿಗಳಿಗೇ ಬಿಡಲ್ಲವೆಂದ್ರೆ ಸಮಸ್ಯೆ ಹೇಳೋದಾದ್ರು ಯಾರು? ಎಂದು ಪೊಲೀಸರ ಕಾರ್ಯವೈಖರಿಗೆ ಬಿ.ಜಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಾಂಗ್ರೆಸ್ ಶಾಸಕ ಅಜಯ ಸಿಂಗ್ರನ್ನು ಒಳಗಡೆ ಬಿಟ್ಟಿದ್ದೀರಿ. ಕಾಂಗ್ರೆಸ್ ಏಜೆಂಟರಾಗಿದ್ದೀರಿ ಎಂದು ಪಾಟೀಲ್ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡರು. ಪೊಲೀಸ್ ಹಾಗೂ ಬಿಜೆಪಿ ನಾಯಕರ ನಡುವಿನ ಗಲಾಟೆಯಿಂದ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದು ಪ್ರಯಾಣಿಕರಿಗೆ ಸಂಕಟ ತಂದೊಡ್ಡಿತ್ತು. ಟ್ರಾಫಿಕ್ ಜಾಮ್ ಆಗಿದ್ದರಿಂದ ಪ್ರಯಾಣಿಕರು ಅಸಮಾಧಾನಗೊಂಡರು.