ಕಲಬುರಗಿ: ರಾಮನಗರದ ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಮದ್ಯೆ ಗಲಾಟೆ ನಡೆದು ಸಿ ಪಿ ಯೋಗೇಶ್ವರ್ ಕಾರಿನ ಮೇಲೆ ಕಲ್ಲು ತೂರಾಟ ಪ್ರಕರಣ ಕುರಿತಾಗಿ ಕಲಬುರಗಿಯ ಅಫಜಲಪುರದಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಯವರು ಅನಗತ್ಯವಾಗಿ ಕಾಲು ಕೆರೆದು ಜಗಳಕ್ಕೆ ಬರ್ತಿದ್ದಾರೆ. ಅಲ್ಲಿ ಎಂಎಲ್ಎ ಇರೋದು ಹೆಚ್.ಡಿ ಕುಮಾರಸ್ವಾಮಿ, ಎಂಎಲ್ಸಿ ಆಗಿರೋರಿಗೆ ಅಲ್ಲೇನು ಕೆಲಸ..? ನಾನು ಎಂಎಲ್ಸಿ ಇದ್ದೇನೆ. ಭದ್ರಾವತಿಯಲ್ಲಿ ಹೋಗಿ ಅಲ್ಲಿನ ಎಂಎಲ್ಎ ಅವರನ್ನು ಬಿಟ್ಟು ಯಾವುದಾದ್ರೂ ಕೆಲಸ ಮಾಡ್ತಿನಿ ಅಂದ್ರೆ ಏನು ಅರ್ಥ..? ಹೀಗೆಲ್ಲಾ ಮಾಡಿ ಕುಮಾರಸ್ವಾಮಿಯನ್ನ ವೀಕ್ ಮಾಡುತ್ತೇನೆ ಅಂದುಕೊಂಡರೆ ಅವರದ್ದು ತಪ್ಪು ಕಲ್ಪನೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಬರಲಿದೆ: ಕಾಂಗ್ರೆಸ್ನವರು ನಡೆಸುತ್ತಿರುವ ಭಾರತ್ ಜೋಡೋ ಕಾರ್ಯಕ್ರಮ, ಅದು ಭಾರತ ಜೋಡೋ ಅಲ್ಲ. ಅದು ಕಾಂಗ್ರೆಸ್ ಜೋಡೋ ಕಾರ್ಯಕ್ರಮ. ಕಾಂಗ್ರೆಸ್ ಅಲ್ಲೆಲ್ಲ ಕಿತ್ತುಕೊಂಡು ಹೋಗ್ತಿದೆ. ಇವರು ಇಲ್ಲಿ ಬಂದು ಜೋಡೋ ಮಾಡ್ತಿದ್ದಾರೆ. ಕಾಂಗ್ರೆಸ್ನಲ್ಲಿ ಯಾರೂ ನಾಯಕರಿಲ್ಲವೆಂದು ಈಗ ಖರ್ಗೆಯವರನ್ನ ಅಧ್ಯಕ್ಷರನ್ನಾಗಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಂಸದ ಡಿ.ಕೆ ಸುರೇಶ್‌ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದ ವಿಚಾರವಾಗಿ ಮಾತನಾಡಿದ ಇಬ್ರಾಹಿಂ, ಡಿಕೆಶಿ ಬಳಿ ದುಡ್ಡು ಇರೋದು ನಿಜ. ಇವರೆಲ್ಲ ಒಂದೇ ಬೀದಿಯಲ್ಲಿ ನಿಂತ ಚೆಲುವೆಯರು. ಅವರಿಗೆ 40% ಇವರಿಗೆ 20%, ಯಾವ ಗಿರಾಕಿ ಯಾವ ಸೇಠ್ಗೆ ಅಂತ ಗೊತ್ತು ಎಂದು ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಓದಿ: ಸಿ ಪಿ ಯೋಗೇಶ್ವರ್ ಮೇಲೆ ಮೊಟ್ಟೆ, ಕಲ್ಲು ಎಸೆದ ಜೆಡಿಎಸ್ ಕಾರ್ಯಕರ್ತರು.. ಪೊಲೀಸರಿಂದ ಲಾಠಿಚಾರ್ಜ್