ಕಲಬುರಗಿ: ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಿದ್ದ ಶಿಕ್ಷಕರು ಕಿತ್ತಾಡಿಕೊಂಡಿರುವ ಘಟನೆ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ ವಿದ್ಯಾಸಾಗರವರ ಮೇಲೆ ಮನೋಶಾಸ್ತ್ರ ವಿಭಾಗದ ಪ್ರೊಫೆಸರ್ ಎಸ್.ಪಿ ಮೇಲಕೇರಿ ಹಲ್ಲೆ ಮಾಡಿದ್ದಾರೆ. ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರಾಧ್ಯಾಪಕಿ ಪ್ರತಿಮಾ ಮಠ ಜೊತೆ ಡಾ. ಜಿ.ಎಂ.ವಿದ್ಯಾಸಾಗರ್ರವರ ಚೇಂಬರ್ಗೆ ಆಗಮಿಸಿದ ಪ್ರೊ.ಮೇಲಕೇರಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಮಾತು ವಿಕೋಪಕ್ಕೆ ತಿರುಗಿ ಪ್ರೊ. ಜಿ.ಎಂ.ವಿದ್ಯಾಸಾಗರ್ ಮೇಲೆ ಮೇಲಕೇರಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಮೇಲಕೇರಿ ಅಣ್ಣನ ಮಗನ ಶಿವಕುಮಾರ್ ಎಂ.ಫಿಲ್ ಮಾಡುತ್ತಿದ್ದು, ಬೇರೆ ಎಲ್ಲಿಯೂ ಕೆಲಸ ಮಾಡುತ್ತಿಲ್ಲವೆಂದು ಮುಚ್ಚಳಿಕೆ ಬರೆದುಕೊಡುವಂತೆ ವಿದ್ಯಾಸಾಗರ್ ಹೇಳಿದ್ದರು. ಇದನ್ನು ಆಕ್ಷೇಪಿಸಿ, ಮುಚ್ಚಳಿಕೆ ಏಕೆ ಬರೆದುಕೊಡಬೇಕೆಂದು ಪ್ರಶ್ನಿಸಿದ ಮೇಲಕೇರಿ, ನನ್ನ ಚೆಂಬರ್ ಅತಿಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಪ್ರೊ. ವಿದ್ಯಾಸಾಗರ್ ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ವಿವಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.