ಕಲಬುರಗಿ: ಅಕ್ಟೋಬರ್ 28ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಎಫ್‌ಡಿಎ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬೇಟೆ ಮುಂದುವರೆಸಿದ್ದು, ಬುಧವಾರ ಇಬ್ಬರು ಪ್ರಾಂಶುಪಾಲರನ್ನು ಬಂಧಿಸಿದ್ದಾರೆ. ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಚಂದ್ರಕಾಂತ್ ಬುರಕಲ್ ಮತ್ತು ಅಫಜಲಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಬಸಣ್ಣ ಪೂಜಾರಿ ಬಂಧಿತರು.
ರಾಯಲ್ ಪಬ್ಲಿಕ್ ಶಾಲೆಯ ಕೆಇಎ ಪರೀಕ್ಷಾ ಕೇಂದ್ರದ ಮುಖ್ಯಸ್ಥರಾಗಿದ್ದ ಚಂದ್ರಕಾಂತ್, ಅಧಿಕೃತ ಅಭ್ಯರ್ಥಿಗಳ ಬದಲು ಬೇರೆಯವರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದರು. ಬಸಣ್ಣ ಪೂಜಾರಿ ಪರೀಕ್ಷೆಯ ಕಸ್ಟೋಡಿಯನ್ ಆಗಿದ್ದರು. ಈ ಇಬ್ಬರು ಪ್ರಶ್ನೆ ಪತ್ರಿಕೆಯನ್ನೂ ಸೋರಿಕೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ಈಗಾಗಲೇ ಬಂಧಿತ ಆರೋಪಿಗಳು ನೀಡಿದ ಸುಳಿವಿನ ಆಧಾರದಲ್ಲಿ ಕಳೆದ ಕೆಲ ದಿನಗಳ ಹಿಂದೆ ಈ ಇಬ್ಬರನ್ನು ಸಿಐಡಿ ಅಧಿಕಾರಿಗಳು ಕರೆಯಿಸಿ ತೀವ್ರ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದರು. ಆ ಬಳಿಕ ಇದೀಗ ಬಂಧಿಸಿ ಕಲಬುರಗಿ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಪ್ರಕರಣದ ವಿವರ: ವಿವಿಧ ನಿಗಮ, ಮಂಡಳಿಗಳ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಕೆಇಎ ಕನ್ನಡ, ಇಂಗ್ಲಿಷ್ ಕಮ್ಯುನಿಕೇಶನ್ ಪರೀಕ್ಷೆ ನಡೆಸಿತ್ತು. ಕಲಬುರಗಿ ನಗರದ ಶರಣಬಸವೇಶ್ವರ ವಿವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಅಭ್ಯರ್ಥಿ ತ್ರಿಮೂರ್ತಿ ಎಂಬಾತ ಹಾಜರಾಗಿದ್ದು ಬ್ಲೂಟೂತ್ ಡಿವೈಸ್ ಕೀ ಮೂಲಕ ಉತ್ತರ ತಿಳಿದುಕೊಂಡು ಪರೀಕ್ಷೆ ಬರೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಪರೀಕ್ಷಾ ಅಕ್ರಮದ ತನಿಖೆಯಲ್ಲಿ ಕಿಂಗ್ಪಿನ್ ಆರ್.ಡಿ.ಪಾಟೀಲ್ ಎಂಬಾತನನ್ನು ಬಂಧಿಸಲಾಗಿದೆ. ಈತ 2021ರಲ್ಲಿ 545 ಪಿಎಸ್ಐ ಹುದ್ದೆಗಳಿಗೆ ನಡೆಸಲಾಗಿದ್ದ ನೇಮಕಾತಿ ಪರೀಕ್ಷಾ ಅಕ್ರಮದ ರೂವಾರಿಯಾಗಿದ್ದ. ಇದೀಗ ಎಫ್‌ಡಿಎ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಕೆಇಎ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ: ಆರ್‌ಡಿ ಪಾಟೀಲ್ ಮತ್ತೆ ನ್ಯಾಯಾಂಗ ಬಂಧನಕ್ಕೆ