ಕಲಬುರಗಿ: ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರ ಅವರನ್ನು ಆರು ವರ್ಷದ ಬದಲಿಗೆ ಅಲ್ಪಾವಧಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಬಿಜೆಪಿಯು ಕೋಲಿ ಸಮಾಜಕ್ಕೆ ಅವಮಾನ ಮಾಡಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಪಾಪದ ಕೊಡ ತುಂಬಿದೆ ಎಂಬ ಬಾಬುರಾವ್ ಚಿಂಚನಸೂರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು. ಪಾಪದ ಕೊಡ ಯಾರದ್ದು ತುಂಬಿದೆ ಅನ್ನೋದು ಜನತೆಗೆ ಗೊತ್ತಿದೆ. ಪಾಪದ ಕೊಡ ತುಂಬಿದವರನ್ನು ಜನರೇ ಮನೆಗೆ ಕಳುಹಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಬಾಬುರಾವ್ ಚಿಂಚನಸೂರ ಸಾಮರ್ಥ್ಯ ನೋಡಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿಲ್ಲ, ಜಿಲ್ಲೆಯಲ್ಲಿ ಪ್ರಿಯಾಂಕ್ ಖರ್ಗೆಯಂತಹ ಬಲವಾದ ಕಾಂಗ್ರೆಸ್ ನಾಯಕರು ಇದ್ದಾರೆ ಅನ್ನೋ ಕಾರಣಕ್ಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಚಿಂಚನಸೂರ ಧನ್ಯವಾದ ತಿಳಿಸಬೇಕು ಎಂದು ಕುಟುಕಿದರು.
ಅಲ್ಲದೇ, ಕೋಲಿ ಸಮಾಜದ ಬಗ್ಗೆ ಅಷ್ಟೋಂದು ಕಾಳಜಿ, ಪ್ರೀತಿ ಮತ್ತು ಗೌರವ ಇದ್ದಿದ್ದರೆ ಬಿಜೆಪಿಯವರು ಬಾಬುರಾವ್ ಚಿಂಚನಸೂರ ಪೂರ್ಣ ಅವಧಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುತ್ತಿದ್ದರು. ಈಗ ಅಲ್ಪಾವಧಿ ಆಯ್ಕೆ ಮಾಡಿರುವುದ ಕೋಲಿ ಸಮಾಜಕ್ಕೆ ಮಾಡಿರುವ ಅನ್ಯಾಯ ಎಂದು ದೂರಿದರು.
ಹಿಂಬಾಗಿಲಿನಿಂದ ಜಿಲ್ಲೆಯಲ್ಲಿ ಬಿಜೆಪಿ ಪ್ರಾತಿನಿಧ್ಯ ಪಡೆಯಲು ಪ್ರಯತ್ನ ಮಾಡುತ್ತಿದೆ. ವಿಶೇಷವಾಗಿ ನನಗೆ ಮತ್ತು ಚಿತ್ತಾಪುರ ಮತಕ್ಷೇತ್ರವನ್ನು ಬಿಜೆಪಿ ನಾಯಕರು ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿಯವರು ಏನೇ ಪ್ಲ್ಯಾನ್ ಮಾಡಿದರೂ, ಏನು ತೊಂದರೆ ಇಲ್ಲ ಎಂದು ಪ್ರಿಯಾಂಕ್ ಸವಾಲು ಹಾಕಿದರು.
ವಿಧಾನಸೌಧ ಈಗ ವ್ಯಾಪಾರಸೌಧವಾಗಿದೆ: ಬಿಜೆಪಿಯವರು ವಿಧಾನಸೌಧವನ್ನು ವ್ಯಾಪಾರಸೌಧವನ್ನಾಗಿ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಅಥವಾ ಹಗರಣ ನಡೆದಿದೆ ಎಂದು ದೂರು ಬಂದರೆ ತನಿಖೆ ನಡೆಸುವುದಾಗಿ ಹೇಳುವ ಸೌಜನ್ಯ ಕೂಡಾ ಬಿಜೆಪಿ ಸಚಿವರಿಗೆ ಇಲ್ಲ ಎಂದು ದೂರಿದರು.
ಏನು ಆಗಿಯೇ ಇಲ್ಲ ಅಂತ ಮೊದಲೇ ಹಣ ಪಡೆದು ಕುಳಿತುವರಂತೆ ವಾದಿಸಲು ಶುರು ಮಾಡುತ್ತಾರೆ. ಸರ್ಕಾರದ ಭ್ರಷ್ಟಾಚಾರ, ಪಿಎಸ್ಐ ಹಗರಣ, ಕೆಪಿಟಿಸಿಎಲ್ ನೇಮಕಾತಿ ಹಗರಣ ಬಗ್ಗೆ ಮಾತನಾಡಿದ್ದಕ್ಕೆ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ. ಯಾವ ಹಗರಣದ ಬಗ್ಗೆಯೂ ತನಿಖೆಯಾಗಿಲ್ಲ. ಐಎಎಸ್, ಐಪಿಎಸ್, ಕೆಪಿಟಿಸಿಎಲ್ ಅಧಿಕಾರಿಗಳು ಸಸ್ಪೆಂಡ್ ಆಗಿರುವುದು ಕೇವಲ ನಮ್ಮ ಹೋರಾಟದಿಂದಾಗಿ ಎಂದು ಹೇಳಿದರು.
ಇದನ್ನೂ ಓದಿ: ಪಂಚಾಯಿತಿ ಸದಸ್ಯ ಬದುಕಿ ಬರಲೆಂದು ಹರಕೆ ಹೊತ್ತ ಗ್ರಾಮಸ್ಥರು.. ವಿಧಿಯ ಮುಂದೆ ನಡೆಯಲಿಲ್ಲ ‘ಪರಮೇಶ್ವರ’ನ ಲೀಲೆ!