ಕಲಬುರಗಿ: ಪಠ್ಯ ಬದಲಾವಣೆ ವಿಚಾರದಲ್ಲಿ ಬಸವಣ್ಣ, ಕುವೆಂಪು ಸೇರಿ ಕೆಲ ಶ್ರೇಷ್ಠ ವ್ಯಕ್ತಿಗಳ ಅಪಮಾನಗೈದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಪಠ್ಯ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಬೊಮ್ಮಾಯಿ ಅವರೇ ಯಾಕೆ ಈ ತಪ್ಪು ಕೆಲಸ ಮಾಡುತ್ತಿದ್ದೀರಿ? ಬಸವ ಪರಂಪರೆಯಲ್ಲಿ ಹುಟ್ಟಿ ಯಾಕೆ ಈ ರೀತಿ ಅವಮಾನ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಅಜಾನ್ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಹೋರಾಟ ವಿಚಾರದ ಬಗ್ಗೆ ಮಾತನಾಡಿ, ಪ್ರಮೋದ್ ಮುತಾಲಿಕ್ ಅವರಿಗೆ ದೇವರು ಸದ್ಬುದ್ಧಿ ನೀಡಲಿ. ಶ್ರೀರಂಗಪಟ್ಟಣದಲ್ಲಿ ಗಲಾಟೆ ಮಾಡಲು ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ಜನರು ಇದನ್ನು ನಂಬಬಾರದು. ಚುನಾವಣೆ ಸಮೀಪ ಬಂದಾಗ ಮತೀಯ ಗಲಭೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್‌ನವರಿಗೆ ಕೈಮುಗಿದು ಕೇಳಿದ್ದೇವೆ ನಮಗೆ ಬೆಂಬಲಿಸಿ ಅಂತಾ, ಅಭ್ಯರ್ಥಿ ಹಾಕೋ ಮೊದಲು ಕೂಡಾ ಸೋನಿಯಾಗಾಂಧಿ ಸೇರಿದಂತೆ ಅನೇಕರ ಜೊತೆ ದೇವೇಗೌಡರು ಮಾತನಾಡಿದ್ದಾರೆ. ಕೋಮವಾದಿ ಶಕ್ತಿ ಮಟ್ಟ ಹಾಕುವ ಇಚ್ಛೆ ಇದ್ದರೆ ನಮಗೆ ಸಹಾಯ ಮಾಡಿ ಎಂದರು.
ಎಲ್ಲಾ ಮಸೀದಿಯಲ್ಲಿ ಶಿವಲಿಂಗ ಹುಡುಕೋದು ಬೇಡ ಅನ್ನೋ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿ, ಭಾಗವತ್ ಅವರು ಹೇಳಿದ್ರೆ ಒಳ್ಳೆಯ ಮನಸ್ಸಿನಿಂದಲೇ ಹೇಳಿದ್ದಾರೆಂದು ಅಂದುಕೊಂಡಿದ್ದೇನೆ. ದಯವಿಟ್ಟು ಭಾಗವತ್ ಅವರು ಸರ್ಕಾರಕ್ಕೆ ಇದನ್ನು ಹೇಳಬೇಕು. ಕೇವಲ ಹೇಳಿಕೆ ನೀಡಿ ಸುಮ್ಮನಾದರೆ ಸಾಲದು. ಇನ್ನೂ ಆರ್ಎಸ್ಎಸ್ನಲ್ಲಿ ಇದೀಗ ದೇಶಭಕ್ತಿ ಉಳಿದಿಲ್ಲ. ಆರ್ಎಸ್ಎಸ್ ಸಿದ್ಧಾಂತ ಕೇಶವಕೃಪಾ ಸಿದ್ಧಾಂತ, ನಮ್ಮದು ಬಸವಕೃಪಾ ಐಡಿಯಾಲಜಿ ಎಂದು ಕುಟುಕಿದ್ದಾರೆ.
ಇದನ್ನೂ ಓದಿ: ಒಂದು ಚಡ್ಡಿ ಸುಟ್ಟಿದ್ದಕ್ಕೆ ಅರೆಸ್ಟ್ ಮಾಡ್ತೀರಾ? ಎಲ್ಲಾ ಜಿಲ್ಲೆಗಳಲ್ಲೂ ಚಡ್ಡಿಗಳನ್ನು ಸುಡ್ತೇವೆ: ನಲಪಾಡ್ ಸವಾಲು
ಕುಟುಂಬಕ್ಕೆ ಒಂದು ಟಿಕೆಟ್ ವಿಚಾರದ ಬಗ್ಗೆ ಮಾತನಾಡಿದ ಅವರು, ನಾವು ರೈತರ ಮಕ್ಕಳು, ರೈತರಂತೆ ಇದ್ದೇವೆ. ರೈತರು ಮಾರೋ ಕಾಳು ಬೇರೆ, ಬಿತ್ತನೆ ಬೀಜ ಬೇರೆ. ದೇವೇಗೌಡರು ಬಿತ್ತನೆ ಕಾಳು ಇದ್ದಂತೆ. ಮೋದಿ ಅವರಿಗೆ ಮಕ್ಕಳಿರದಿದ್ದರೆ ನಮ್ಮ ತಪ್ಪಾ? ಅವರಿಗೆ ಕುಟುಂಬ ಇಲ್ಲ. ನಮಗೆ ಇದೆ. ನಮ್ಮವರು ರಾಜಕೀಯಕ್ಕೆ ಬರುತ್ತಾರೆ, ತಪ್ಪೇನಿದೆ ಎಂದಿದ್ದಾರೆ.