ಕಲಬುರಗಿ: ಕೊರೊನಾ ಹಿನ್ನೆಲೆಯಲ್ಲಿ ಶಾಲೆ ಪುನಾರಂಭಿಸುವ ಬದಲು ಆನ್ಲೈನ್ ಶಿಕ್ಷಣವನ್ನು ಮುಂದುವರಿಸುವಂತೆ ಮಾಜಿ ಸಚಿವ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
ಕೊರೊನಾದಿಂದ ಗುಣಮುಖರಾಗಿ ತಮ್ಮ ನಿವಾಸದಲ್ಲಿ ಚಿಕಿತ್ಸೆ ಮುಂದುವರಿಸಿದ ಗುತ್ತೇದಾರ್, ವಿಡಿಯೋ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
"ಕೊರೊನಾದಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಆರಂಭಿಸುವುದು ಬೇಡ. ರಾಜ್ಯದಲ್ಲಿ ಕೊರೊನಾದಿಂದ ಪ್ರತಿನಿತ್ಯ ಸಾವು-ನೋವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಶಾಲೆ ಪ್ರಾರಂಭಿಸಿದರೆ ಮಕ್ಕಳಿಗೂ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಮಕ್ಕಳ ಬದುಕಿನ ಹಿತದೃಷ್ಟಿಯಿಂದ ವರ್ಷಗಳ ಕಾಲ ಆನ್ಲೈನ್ ಶಿಕ್ಷಣ ಮುಂದುವರಿಸುವುದು ಉತ್ತಮ" ಎಂದು ಗುತ್ತೇದಾರ್ ಅಭಿಪ್ರಾಯಪಟ್ಟಿದ್ದಾರೆ.