ಕಲಬುರಗಿ: ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ಮುತ್ಯಾಲ ಕೊಲೆ ಪ್ರಕರಣ ಹಂತಕರನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣ ಬೆನ್ನಟ್ಟಿದ ಸೇಡಂ ಪೊಲೀಸರಿಗೆ ಆರಂಭದಿಂದಲೇ ಮಲ್ಲಿಕಾರ್ಜುನ್ ಮುತ್ಯಾಲ್ ಕುಟುಂಬದ ಮೇಲೆ ಅನುಮಾನ ಕಾಡ್ತಾ ಇತ್ತು. ಮಲ್ಲಿಕಾರ್ಜುನ್ ಮುತ್ಯಾಲ್ ನನ್ನು ಸೊಸೆಯ ಸಹೋದರನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರೋದು ಇದೀಗ ಬೆಳಕಿಗೆ ಬಂದಿದೆ. ಕೊನೆಗೆ ಬಿಜೆಪಿ ಮುಖಂಡ ಕೊಲೆ ಪ್ರಕರಣ ಸಂಬಂಧ ಸೇಡಂ ಪೊಲೀಸರು ಮಲ್ಲಿಕಾರ್ಜುನ ಮುತ್ಯಾಲ್ ಅಳಿಯ ಸೇರಿ ನಾಲ್ವರು ಆರೋಪಿಗಳನ್ನ ಹೆಡೆಮುರಿ ಕಟ್ಟಿ ಅಂದರ್ ಮಾಡಿದ್ದಾರೆ.
ನವೆಂಬರ್ 15 ರಂದು ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ಮುತ್ಯಾಲ ಕೊಲೆಯನ್ನ ಕಂಡು ಸೇಡಂ ಪಟ್ಟಣದ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಕತ್ತಿಗೆ ಹಗ್ಗ ಬಿಗಿದು ಬಳಿಕ ಮರ್ಮಾಂಗಕ್ಕೆ ಕಲ್ಲಿನಿಂದ ಬರ್ಬರವಾಗಿ ಜಜ್ಜಿ ಹಂತಕರು ಸಣ್ಣ ಹೆಜ್ಜೆ ಗುರುತನ್ನು ಬಿಡದೆ ಎಸ್ಕೇಪ್ ಆಗಿದ್ದರು. ಇತ್ತ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಸೇಡಂ ಪೊಲೀಸರು ಮಲ್ಲಿಕಾರ್ಜುನ್ ಮುತ್ಯಾಲ ಕೊಲೆ ಮಾಡಿದ ನಾಲ್ವರು ಹಂತಕರನ್ನ ಕೊನೆಗೂ ಹೆಡೆಮುರಿ ಕಟ್ಟಿ ಅಂದರ್ ಮಾಡಿದ್ದಾರೆ.
ಸೇಡಂ ಪಟ್ಟಣದ ಲಿಂಗರಾಜ್ , ಅವಿನಾಶ್ , ವಿಜಯಕುಮಾರ್ , ಕರಣ್ ಅನ್ನೋ ನಾಲ್ಕು ಜನರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಲಿಂಗರಾಜ್ ಸಹೋದರಿ ಶ್ವೇತಾ ಮಲ್ಲಿಕಾರ್ಜುನ್ ಮುತ್ಯಾಲ ಮಗ ಶ್ರೀನಿವಾಸ್ ನನ್ನ ಲವ್ ಮಾಡಿ ಮದುವೆಯಾಗಿದ್ದಳು. ಸಹೋದರಿಯ ಅಂತರ್ಜಾತಿ ವಿವಾಹಕ್ಕೆ ಒಪ್ಪದ ಲಿಂಗರಾಜ್, ಮಲ್ಲಿಕಾರ್ಜುನ್ ಮುತ್ಯಾಲ್ ಮತ್ತು ಆತನ ಮಗನ ಮೇಲೆ ಕೆಂಡ ಕಾರ್ತಿದ್ದ. ಆದರೆ ಮದುವೆಯಾಗಿ ಒಂದು ವರ್ಷದ ಒಳಗೆ ಈ ಮಲ್ಲಿಕಾರ್ಜುನ್ ಮುತ್ಯಾಲ್ ಸೊಸೆಗೆ ತನ್ನ ತವರು ಮನೆಯಿಂದ ಆಸ್ತಿ ತರುವಂತೆ ಒತ್ತಾಯ ಮಾಡಿದ್ದರಂತೆ.
ಹತ್ತು ಲಕ್ಷಕ್ಕೆ ಸುಪಾರಿ: ಮಾವ ಪದೇ ಪದೆ ಆಸ್ತಿ ತರುವಂತೆ ಒತ್ತಾಯ ಮಾಡ್ತಿದ್ದ ಹಿನ್ನೆಲೆ ಸೊಸೆ ಶ್ವೇತಾ ತನ್ನ ತಂದೆ ಮತ್ತು ಸಹೋದರ ಲಿಂಗರಾಜ್ ಬಳಿ ಆಸ್ತಿ ಕೇಳಿದ್ದಳು. ಆಸ್ತಿಗಾಗಿ ಸಹೋದರಿಯನ್ನ ಟಾರ್ಚರ್ ಕೊಟ್ಟು ಕಳುಹಿಸುತ್ತಿದ್ದಕ್ಕೆ ಕೆರಳಿ ಕೆಂಡವಾದ ಲಿಂಗರಾಜ್ ಅವಿನಾಶ, ವಿಜಯ ಕುಮಾರ್, ಕರಣ್ ಮೂರು ಜನರಿಗೆ ಮಲ್ಲಿಕಾರ್ಜುನ್ ಮುತ್ಯಾಲ್ ನನ್ನ ಕೊಲೆ ಮಾಡೋದಕ್ಕೆ ಹತ್ತು ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ.
ಸುಪಾರಿ ಪಡೆದ ಅವಿನಾಶ್ ಅಂಡ್ ಟೀಮ್ ನವೆಂಬರ್ 15 ರ ಮಧ್ಯರಾತ್ರಿ ಮಲ್ಲಿಕಾರ್ಜುನ್ ಮುತ್ಯಾಲ್ ಅಂಗಡಿಯಲ್ಲಿ ಮಲಗಿದ್ದಾಗ ಹೊರಗಡೆ ಹೊಂಚು ಹಾಕಿ ಕೂತಿದ್ದರು. ಮಧ್ಯರಾತ್ರಿ ಮೂತ್ರ ವಿಸರ್ಜನೆಗೆ ಹೊರಗಡೆ ಬಂದಾಗ ಮೂರು ಜನರು ಅಟ್ಯಾಕ್ ಮಾಡಿ ಕಲ್ಲಿನಿಂದ ಮರ್ಮಾಂಗಕ್ಕೆ ಜಜ್ಜಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಪ್ರಕರಣ ಸಂಬಂಧ ಸುಪಾರಿ ಕೊಟ್ಟ ಲಿಂಗರಾಜ್ ಸೇರಿ ನಾಲ್ವರನ್ನ ಸೇಡಂ ಪೊಲೀಸರು ಬಂಧಿಸಿದ್ದಾರೆ.
ಮಲ್ಲಿಕಾರ್ಜುನ್ ಮುತ್ಯಾಲ್ ಕೊಲೆ ಮಾಡೋದಕ್ಕೆ ಸುಪಾರಿ ಪಡೆದ ಅವಿನಾಶ್ ಮೊದಲು ಈ ಲಿಂಗರಾಜ್ ಹಾರ್ಡ್ ವೇರ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಅದಾದ ಬಳಿಕ ಅಲ್ಲಿಂದ ಕೆಲಸ ಬಿಟ್ಟು ಆಟೋ ಓಡಿಸಿಕೊಂಡಿದ್ದ. ಈ ಮಧ್ಯೆ ಲಿಂಗರಾಜ್ ಆಸ್ತಿಗಾಗಿ ತನ್ನ ಮಾವ ಕ್ಯಾತೆ ತೆಗೆದಾಗ ಅವಿನಾಶ್ ನನ್ನ ಸಂಪರ್ಕ ಮಾಡಿದ್ದಾನೆ. ಅವಿನಾಶ್ ಕೊಲೆ ಡೀಲ್ ಒಪ್ಪಿಕೊಂಡು ಹತ್ತು ಲಕ್ಷಕ್ಕೆ ಡೀಲ್ ಕುದುರಿಸಿದ್ದಾರೆ.
ಚಿತ್ತಾಫುರ ತಾಲೂಕಿನ ಕಾಡಿನಲ್ಲೆ ವಾಸ್ತವ್ಯ: ಅದ್ರಂತೆ ಪ್ರತಿದಿನ ರಾತ್ರಿ ಮಲ್ಲಿಕಾರ್ಜುನ್ ಮುತ್ಯಾಲ್ ಅಂಡಗಿಯಲ್ಲಿ ಮಲಗಿದ್ದಾಗ ಒಂದು ವಾರದಿಂದ ಆತನ ಚಟುವಟಿಕೆಯನ್ನ ಸಂಪೂರ್ಣವಾಗಿ ಗಮನಿಸಿದ್ದಾರೆ. ಕೊನೆಗೆ ನವೆಂಬರ್ 15 ರಂದು ಕೊಲೆಗೆ ಮೂಹರ್ತ ಫಿಕ್ಸ್ ಮಾಡಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಸೇಡಂನಿಂದ ನೇರವಾಗಿ ಮಳಖೇಡವರೆಗೂ ನಡೆದುಕೊಂಡು ಬಂದ ಹಂತಕರು ಎರಡು ದಿನ ಚಿತ್ತಾಫುರ ತಾಲೂಕಿನ ಕಾಡಿನಲ್ಲೆ ವಾಸ್ತವ್ಯ ಹೂಡಿದ್ದಾರೆ.
ಕೊಲೆಯಾದ ಎರಡು ದಿನದ ಬಳಿಕ ಲಿಂಗರಾಜ್ ಕೊಲೆಯ ಡೀಲ್ ಅಮೌಂಟ್ ಹತ್ತು ಲಕ್ಷದಲ್ಲಿ ಐದು ಲಕ್ಷವನ್ನ ಅವಿನಾಶ್ ಅಂಡ್ ಗ್ಯಾಂಗ್ ಕೊಟ್ಟಿದ್ದಾನೆ. ಐದು ಲಕ್ಷ ಹಣ ತೆಗೆದುಕೊಂಡು ಅವಿನಾಶ್ ಅಂಡ್ ಕರಣ್ ಇಬ್ಬರು ಮಹಾರಾಷ್ಟ್ರದ ಪುಣೆಗೆ ತೆರಳಿ ಅಲ್ಲಿ ಮೂರು ದಿನ ವಾಸ್ತವ್ಯ ಹೂಡಿದ್ದಾರೆ. ವಿಜಯಕುಮಾರ್ ಇತ್ತ ಸೇಡಂನಲ್ಲೇ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದ.
ಮಲ್ಲಿಕಾರ್ಜುನ್ ಮುತ್ಯಾಲ್ ಅಂಗಡಿಗೆ ಈ ಹಿಂದೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಅವಿನಾಶ್ ನನ್ನ ಪೊಲೀಸರು ಹಿಡಿದುಕೊಂಡು ಬಂದು ವರ್ಕೌಟ್ ಮಾಡಿದಾಗ ಕೊಲೆಯ ಅಸಲಿ ಕಹಾನಿ ಬಾಯಿಬಿಟ್ಟಿದ್ದಾನೆ. ಮಲ್ಲಿಕಾರ್ಜುನ್ ಮುತ್ಯಾಲ್ ಅಳಿಯ ಸುಪಾರಿ ಕೊಟ್ಟು ಕೊಲೆ ಮಾಡಿಸಿರೋದಾಗಿ ಒಪ್ಪಿಕೊಂಡಿದ್ದಾನೆ.
ನಾಲ್ಕು ಲಕ್ಷ ಹಣ ವಶ: ಸದ್ಯ ಕೊಲೆ ಪ್ರಕರಣ ಸಂಬಂಧ ಸೇಡಂ ಪೊಲೀಸರು ನಾಲ್ವರು ಆರೋಪಿಗಳನ್ನ ಅರೆಸ್ಟ್ ಮಾಡಿ ಸುಪಾರಿ ಪಡೆದಿದ್ದ ಹಣದಲ್ಲಿ ನಾಲ್ಕು ಲಕ್ಷವನ್ನ ವಶ ಪಡಿಸಿಕೊಂಡಿದ್ದಾರೆ. ಅದೇನೆ ಆಗಲಿ ಒಂದು ಕಡೆ ಆಸ್ತಿಗಾಗಿ ತನ್ನ ಮಗನನ್ನ ಮುಂದೆ ಬಿಟ್ಟು ಲವ್ ಮಾಡಿಸಿ ಮದುವೆ ಆಗುವಂತೆ ಮಾಡಿದ್ದಕ್ಕೆ ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ಮುತ್ಯಾಲ್ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಮತ್ತೊಂದೆಡೆ ಇರುವ ಒಬ್ಬಳೆ ತಂಗಿಯನ್ನ ಚೆನ್ನಾಗಿ ನೋಡಿಕೊಳ್ಳ ಬೇಕಿದ್ದ ಸಹೋದರ ಮಾವನನ್ನೇ ಕೊಲೆ ಮಾಡಿ ಕಂಬಿ ಹಿಂದೆ ಸೇರಿದ್ದಾನೆ.
ಓದಿ: ಹೋಟೆಲ್ನಲ್ಲಿ ಮದ್ಯ, ಧೂಮಪಾನಕ್ಕೆ ಅವಕಾಶ ನಿರಾಕರಣೆ.. ಸಿಟ್ಟಿಗೆದ್ದು ಗುಂಡು ಹಾರಿಸಿದ ಗುಂಡಪ್ಪ!